ಚಿತ್ರದುರ್ಗ: ಅಲ್ಲಿ ಶನಿವಾರ ರಾತ್ರಿ ಸಂಗೀತ ಲೋಕವೇ ಧರೆಗಿಳಿದಿತ್ತು. ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನೀನು…, ಹೀಗೆ ರೊಮ್ಯಾಂಟಿಕ್ ಗೀತೆಗಳಿಂದ ಹಿಡಿದು ಶರಣೆಂಬೆನಾ ಶಶಿಭೂಷಣ.. ಎಂಬ ಭಕ್ತಿ ಪ್ರಧಾನ ಗೀತೆಗಳವರೆಗೂ ಹಬ್ಬಿದ ವ್ಯಾಪ್ತಿ, ನೆರೆದಿದ್ದ ಶ್ರೋತೃಗಳು ತಲೆದೂಗುವಂತೆ ಮಾಡಿತು.
ಇದು ನಗರದ ಐಶ್ವರ್ಯಾ ಫೋರ್ಟ್‌ನಲ್ಲಿ ‘ನಾವೆಲ್ಲರೂ ಒಂದೇ’ ತಂಡ ಆಯೋಜಿಸಿದ್ದ ಸಂವಾದ ಸಂಗೀತ ಕಾರ್ಯಕ್ರಮದ ಚಿತ್ರಣ.
ಹಾಡು ಹುಟ್ಟಿದ ಗಳಿಗೆ, ಹಾಡಿನ ರಾಗ, ಚಿತ್ರ, ನಾಯಕ, ಬಿಡುಗಡೆಯಾದ ಕಾಲಘಟ್ಟ ಹೀಗೆ ಒಂದೊಂದೇ ಅಂಶಗಳನ್ನು ಕೆಜಿಎಫ್‌ನ ಹಿರಿಯ ಕನ್ನಡ ಉಪನ್ಯಾಸಕ ಡಾ.ಡಿ.ಎಸ್.ಶ್ರೀನಿವಾಸ್ ಪ್ರಸಾದ್, ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಅವರು ಸಂವಾದದಲ್ಲಿ ಅನಾವರಣಗೊಳಿಸುತ್ತ ಸಾಗಿದರು.
ಯಾವುದೇ ಗೀತೆಯಾದರೂ ಅದಕ್ಕೆ ಒಂದು ರಾಗವಿರುತ್ತದೆ. ಇದಕ್ಕೆಲ್ಲ ಶಾಸ್ತ್ರೀಯ ಸಂಗೀತವನ್ನು ಯಾವುದಾದರೊಂದು ರೂಪದಲ್ಲಿ ಬಳಸಿಕೊಳ್ಳಲಾಗಿರುತ್ತದೆ. ಆದರೆ ಪ್ರಧಾನವಾಗಿ ಯಾವ ರಾಗ ಬಳಸಿದ್ದಾರೆ ಎಂಬುದು ಅಲ್ಲಿ ಮುಖ್ಯವಾಗುತ್ತದೆ. ಶಿವರಂಜಿನಿ ರಾಗ ವಿಷಾದ ಭಾವಕ್ಕಷ್ಟೇ ಅಲ್ಲದೆ ರೊಮ್ಯಾಂಟಿಕ್ ಆಗಿಯೂ ಬಳಸಿಕೊಳ್ಳಬಹುದು. ಕರ್ನಾಟಕಿ ಸಂಗೀತದಲ್ಲಿ ಅಭೇರಿ ಎನಿಸಿಕೊಳ್ಳುವ ಭೀಮಪಲಾಸ್ ರಾಗ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿ ಬಳಕೆಯಾಗಿದೆ. ಇದೇ ರಾಗದಲ್ಲಿ ಮೂಡಿಬಂದ ತೂ ಚೀಜ್ ಬಡೀ ಹೈ ಮಸ್ತ್ ಮಸ್ತ್.. ಯಾರಿಟ್ಟರೀ ಚುಕ್ಕಿಯಂತಹ ಗೀತೆಗಳು ಜನಪ್ರಿಯವಾಗಿವೆ ಎಂಬ ವಿಷಯಗಳು ಸಂವಾದದಲ್ಲಿ ಮಂಡಿತವಾದವು.
ಕಲಾವಿದರಾದ ಬೆಂಗಳೂರಿನ ಜ್ಯೋತಿ ರವಿಪ್ರಕಾಶ್, ಶ್ರೀನಿವಾಸಮೂರ್ತಿ ಎಚ್.ಎಸ್.ಶ್ರೀನಿವಾಸ್ ಭಾರದ್ವಾಜ್, ಅಂಜಲಿ ಹಳಿಯಾಳ್, ವಿಜಯಾನಂದ್, ಲಕ್ಷ್ಮಿ ಶ್ರೇಯಾಂಸಿ, ಬಸವರಾಜೇಶ್ವರಿ ಅವರು ಚಿತ್ರಗೀತೆಗಳಿಗೆ ಜೀವ ತುಂಬಿದರು. ಕಂಗಳು ವಂದನೆ ಹೇಳಿದೆ, ನಗುವೇ ಸ್ನೇಹದ ಹಾಡು, ಕನ್ನಡ ನಾಡಿನ ವೀರ ರಮಣಿಯ, ಕನಸಲ್ಲಿ ಬಂದವನಾರೆ, ನಲ್ಲನೆ ಸವಿ ಮಾತೊಂದಾ ಹೇಳುವೆ, ಆಸೆಯ ಭಾವ, ಬೊಂಬೆಯಾಟವಯ್ಯ.. ಹೀಗೆ ಮೂವತ್ತಕ್ಕೂ ಹೆಚ್ಚು ಹಾಡುಗಳು ಅನುರಣಿಸಿದವು.
ಡಾ.ಡಿ.ಎಸ್.ಶ್ರೀನಿವಾಸ್ ಪ್ರಸಾದ್ ಅವರ 95 ಸಿನಿ ಕಲಾವಿದರ ಕುರಿತಾದ ಲೇಖನಗಳ ಕೃತಿ ‘ಸಿನಿ ಬಿಂಬ’ ಹಾಗೂ ಸಂಗೀತದ ರಾಗಾಧಾರಿತ ಗೀತೆಗಳ ಕುರಿತಾದ ಕೃತಿ ‘ಸ್ವರ ರಾಗ ಸುಧಾ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಅಂಜನಾ ನೃತ್ಯ ಕಲಾ ಕೇಂದ್ರದ ಪ್ರಾಚಾರ್ಯ ವಿದ್ವಾನ್ ಸಿ.ಆರ್.ಶಿವಪ್ರಕಾಶ್, ನೃತ್ಯ ಕಲಾವಿದೆ ಡಾ.ನಂದಿನಿ ಶಿವಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.