ಜಿಲ್ಲೆ

ಮಸ್ಕತ್‌ನಿಂದ 63 ಮಂದಿ ಮಂಗಳೂರಿಗೆ

Dakshina Kannada

ಮಂಗಳೂರು: ವಂದೇ ಭಾರತ್ ಯೋಜನೆಯಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೂರನೇ ವಿಮಾನ ಬುಧವಾರ ರಾತ್ರಿ ಆಗಮಿಸಿದೆ.

ಮಸ್ಕತ್‌ನಿಂದ 178 ಪ್ರಯಾಣಿಕರನ್ನು ಹೊತ್ತು ತಂದ ಈ ವಿಮಾನ ಮೊದಲು ಬೆಂಗಳೂರಿಗೆ ಆಗಮಿಸಿ, ಬಳಿಕ ಮಂಗಳೂರಿನತ್ತ ಪಯಣಿಸಿತು. ರಾತ್ರಿ 8.05ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 115 ಮಂದಿ ಇಳಿದರೆ, ಮಂಗಳೂರು ವಿಮಾನ ನಿಲ್ದಾಣಕ್ಕೆ 63 ಮಂದಿ ಆಗಮಿಸಿದರು.

ಪ್ರಯಾಣಿಕರು ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ಬಳಿಕ ಆರೋಗ್ಯ ಇಲಾಖೆ ತಪಾಸಣಾ ತಂಡದಿಂದ ಪ್ರತಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ಬಳಿಕ ನಿಗದಿತ ಕ್ವಾರಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತ ಬಸ್ಸಿನಲ್ಲಿ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿತ್ತು.

ಮೇ 12ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿದ ಮೊದಲ ವಿಮಾನದಲ್ಲಿ 179 ಕರಾವಳಿಗರು ಆಗಮಿಸಿದ್ದರು. 18ರಂದು ದುಬೈಯಿಂದ ಬಂದ 2ನೇ ವಿಮಾನದಲ್ಲಿ ದ.ಕ., ಉಡುಪಿ, ಕೊಡಗು ಹಾಗೂ ಬೆಂಗಳೂರಿನ 178 ಮಂದಿ ಆಗಮಿಸಿದ್ದರು.

23ರಂದು ಮೂರನೇ ವಿಮಾನ: ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಮಂಗಳೂರಿಗೆ ಮೂರನೇ ವಿಮಾನ ನಿಕ್ಕಿಯಾಗಿದೆ.

ಮೇ 12 ಹಾಗೂ 18ರಂದು ದುಬೈನಿಂದ ಎರಡು ವಿಮಾನಗಳು ನೇರವಾಗಿ ಮಂಗಳೂರಿಗೆ ಬಂದಿದ್ದವು. ಮೂರನೇ ವಿಮಾನ 23ರಂದು ಬೆಂಗಳೂರು ಮೂಲಕ ಮಂಗಳೂರು ಬರಲಿದೆ. ಐಎಕ್ಸ್ 834 ವಿಮಾನ ದುಬೈನಿಂದ ಸಾಯಂಕಾಲ 4.30ಕ್ಕೆ ಹೊರಟು ಬೆಂಗಳೂರಿಗೆ 9.50ಕ್ಕೆ, ಅಲ್ಲಿಂದ ರಾತ್ರಿ 10.50ಕ್ಕೆ ಹೊರಟು 1.45 ಮಧ್ಯರಾತ್ರಿ ಮಂಗಳೂರು ತಲುಪಲಿದೆ. ದೋಹಾ- ಬೆಂಗಳೂರು-ಮಂಗಳೂರು ವಿಮಾನ ಮೇ 22ರಂದು ಮಧ್ಯಾಹ್ನ 1.30ಕ್ಕೆ ಹೊರಟು, ರಾತ್ರಿ 8.05ಕ್ಕೆ ಬೆಂಗಳೂರು, ಅಲ್ಲಿಂದ 9 ಗಂಟೆಗೆ ಹೊರಟು ರಾತ್ರಿ 9.55ಕ್ಕೆ ಮಂಗಳೂರು ತಲುಪಲಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.