ಹುಬ್ಬಳ್ಳಿ: ಮಹಾತ್ಮ ಬಸವೇಶ್ವರ ಜಯಂತಿ ಅಂಗವಾಗಿ ಇಲ್ಲಿಯ ಮೂರುಸಾವಿರ ಮಠದಲ್ಲಿ ಏ. 27ರಿಂದ ನಾಲ್ಕು ದಿನಗಳವರೆಗೆ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಹೂಗಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 27ರಂದು ಬೆಳಗ್ಗೆ 8.30ಕ್ಕೆ ಮೂರುಸಾವಿರ ಮಠ ಆವರಣದಲ್ಲಿ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಶಾಸಕ ಪ್ರದಿಪ ಶೆಟ್ಟರ್, ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಅರವಿಂದ ಕುಬಸದ, ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ, ಸಿದ್ಧಾರೂಢ ಮಠ ಟ್ರಸ್ಟ್ ಧರ್ಮದರ್ಶಿ ಮಂಜುನಾಥ ಮುನವಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 4ಕ್ಕೆ ಮೂರುಸಾವಿರ ಮಠದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದರು.
ಉತ್ಸವದ ಅಂಗವಾಗಿ ಮಕ್ಕಳು, ಮಹಿಳೆಯರಿಗೆ ವೇಷಭೂಷಣ, ರಂಗೋಲಿ, ಇತರ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸಾಧಕ ಮಹಿಳೆಯರು, ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಏ. 28ರಂದು ಸಂಜೆ 4ಕ್ಕೆ ಮಹಿಳೆಯರು, ಮಕ್ಕಳಿಂದ ವಚನ ಗಾಯನ ಸ್ಪರ್ಧೆ, 6.30ಕ್ಕೆ ದಿಯಾ ಆವಾರಿ ಅವರಿಂದ ಭರತ ನಾಟ್ಯ, ವಿದ್ವಾನ್ ಸುಜಯ ಶಾನಭಾಗ ಮತ್ತು ಕಲಾ ಸುಜಯ ತಂಡದಿಂದ ವಚನಾಧಾರಿತ ನೃತ್ಯರೂಪಕಗಳು, ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಏ. 29ರಂದು ಸಂಜೆ 6.30ಕ್ಕೆ ಬಸವರಾಜ ಕೆಂದೂಳಿ ಅವರಿಂದ ವಚನ ಗಾಯನ ನಡೆಯಲಿದೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಏ, 30ರಂದು ಸಂಜೆ 4ಕ್ಕೆ ಕರ್ನಾಟಕದ ಸಾಂಸತಿಕ ನಾಯಕ ವಿಶ್ವಗುರು ಬಸವಣ್ಣನವರ ಭವ್ಯ ಮೆರವಣಿಗೆ ನಡೆಯಲಿದೆ. ಇದೇ ಮೊದಲು ಅನುಭವ ಮಂಟಪ ಮಾದರಿಯನ್ನು ಮಾಡಲಾಗಿದೆ. ಜತೆಗೆ ವಿವಿಧ ವಾದ್ಯಮೇಳ, ಡೊಳ್ಳು ಕುಣಿತ, ಕೋಲಾಟ, ಕರಡಿ ಮಜಲು ಮೆರವಣಿಗೆಗೆ ಮೆರಗು ತರಲಿವೆ ಎಂದರು.
ಉತ್ಸವ ಸಮಿತಿ ಪ್ರವಿಣ ಕುಬಸದ, ರತ್ನಾ ಗಂಗಣ್ಣವರ, ಅಶೋಕ ಮೀಶೆ, ಚನ್ನಬಸಪ್ಪ ಧಾರವಾಡಶೆಟ್ರು, ಈರಪ್ಪ ಎಮ್ಮಿ ಗೋಷ್ಠಿಯಲ್ಲಿದ್ದರು.