ಚಿತ್ರದುರ್ಗ: ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದ ಹೈಕೋರ್ಟ್ ಆದೇಶದ ಬೆನ್ನಲ್ಲೇ ಕೆಲವರು ತರಾತುರಿಯಲ್ಲಿ ಮುರುಘಾಮಠದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ದೂರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಕ್ಕೆ ಸಂಬಂಧಿಸಿದಂತೆ ಜುಲೈ 4 ರೊಳಗೆ ಭಕ್ತರು, ಸಾರ್ವಜನಿಕರು, ವಿವಿಧ ಸಮುದಾಯಗಳ ಪ್ರಮುಖರ ಸಭೆ ಕರೆದು ನಿರ್ಣಯಿಸುವಂತೆ ಮೇ 22 ರಂದು ಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ಮಾರ್ಗದರ್ಶನ ಕೋರಿದ್ದಾರೆ ಎಂದರು.
ಇಲಾಖೆ ಕಾರ‌್ಯದರ್ಶಿ ಕಾನೂನು ಸಲಹೆ ಕೋರಿರುವ ನಡುವೆಯೇ, ನೂರಾರು ಶಾಖಾ ಮಠಗಳನ್ನು ಹೊಂದಿರುವ ಮಠದ ಹಿಂದಿನ ಸಮಿತಿ ಸದಸ್ಯರು ಸೇರಿ ಅನೇಕರಿಗೆ ಸಾರ್ವಜನಿಕವಾಗಿ ವಿಷಯ ತಿಳಿಸಿಲ್ಲ.
ಆತುರದಲ್ಲಿ ನಿರ್ಣಯ
ಆತುರದಲ್ಲಿ 50-100 ಜನರು ಸೇರಿ ಮಠ, ವಿದ್ಯಾಪೀಠದ ಆಡಳಿತಕ್ಕೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಹಲವರ ಸಹಿಗಳನ್ನು ಖಾಲಿ ಪೇಪರ್‌ಗೆ ಹಾಕಿಸಿಕೊಳ್ಳಲಾಗಿದ್ದು, ನಿರ್ಣಯದ ವಿರುದ್ಧ ನಾನು, ಇತರರು ಹೈಕೋರ್ಟ್ ಮೊರೆ ಹೋಗಿದ್ದೇವೆ. ಇದರ ವಿಚಾರಣೆ ಶೀಘ್ರ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಾಶ್ರಯದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಐತಿಹಾಸಿಕ ಮಠಕ್ಕೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವೊಂದೇ ಅಲ್ಲ, ರಾಜ್ಯ, ಹೊರ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ.
ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನೇ ಮಠಕ್ಕೆ ದಾನ ಬರೆದವರಿದ್ದಾರೆ. ನಾನು ಸೇರಿ ಮಠದ ಟ್ರಸ್ಟ್‌ನಲ್ಲಿ 21 ಸದಸ್ಯರಿದ್ದೇವೆ ಎಂದರು.
ಆಡಳಿತಾಧಿಕಾರಿ ಅವಧಿ ತಾತ್ಕಾಲಿಕ ಸಲಹಾ ಸಮಿತಿ ಕೂಡ ಪ್ರತ್ಯೇಕವಾಗಿದೆ. ಇವುಗಳಿನ್ನ್ನೂ ಊರ್ಜಿತವಿರುವ ಸನ್ನಿವೇಶದಲ್ಲಿ ಏಕಾಏಕಿ ಸಭೆ ಕರೆದಿದ್ದೇವೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲಾಗಿದೆ.
ಶ್ರೀ ಬಸವಪ್ರಭು ಸ್ವಾಮೀಜಿ ಅವರ ನೇತೃತ್ವ ಧಾರ್ಮಿಕ ಕೈಂಕರ್ಯಗಳಿಗೆ ನಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು.
40 ಕೋಟಿ ರೂ. ಸಾಲ
ನವ ಕೋಟಿ ನಾರಾಯಣ ಹೆಸರಿನ ಮಠಕ್ಕೆ ಅಂದಾಜು 40 ಕೋಟಿ ರೂ. ಸಾಲವಿದೆ. ಆಡಳಿತಾಧಿಕಾರಿ ನೇಮಕ ಬಳಿಕ ಈವರೆಗೆ ಅಂದಾಜು 10.50 ಕೋಟಿ ರೂ. ಸಾಲವನ್ನು ಮರು ಪಾವತಿಸಲಾಗಿದೆ.
ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತಿತರ ವಿಚಾರಗಳಲ್ಲಿ ಬ್ಯಾಂಕ್ ಗ್ಯಾರಂಟಿ ಮೊಬಲಗು ಹತ್ತಾರು ಕೋಟಿ ರೂ. ಗಳನ್ನು ಮರಳಿ ಪಡೆಯಲು ಶ್ರಮಿಸಿದ್ದೇವೆ.
ಮೆಡಿಕಲ್ ಕಾಲೇಜು ಮುಚ್ಚುವ ಹಂತಕ್ಕೆ ಬಂದಿತ್ತು. ಮಠ-ವಿದ್ಯಾಪೀಠದ ಎಲ್ಲ ಸಂಸ್ಥೆಗಳನ್ನು ಸರಿದಾರಿಗೆ ತರಲು, ಆಸ್ತಿ ಸಂರಕ್ಷಿಸಲು ಪಾರದರ್ಶಕವಾಗಿ ಪ್ರಯತ್ನಿಸಿದ್ದೇವೆ ಎಂದರು.
ರಾಜ್ಯ ಸರ್ಕಾರಕ್ಕೆ ಮನವಿ
ಪ್ರಸ್ತುತ ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸುವಂತೆ ಹಾಗೂ ಆಡಳಿತಾಧಿಕಾರಿಯನ್ನು ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು.
ಆನೆ ನಡೆದಿದ್ದೇ ದಾರಿ ಎಂದು ಗೊಂದಲಗಳು ಮುಂದುವರಿದರೆ ರಾಜ್ಯಾದ್ಯಂತ ಮುರುಘಾಮಠ ಉಳಿಸಿ ಅಭಿಯಾನ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಜನಪ್ರತಿನಿಧಿಯಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಮಠದ ಕಾರ್ಯಕ್ಕೆ ಸ್ಪಂದಿಸುವುದಕ್ಕೆ ತಕರಾರಿಲ್ಲ. ಆದರೆ, ಅವರು ಆತುರದಿಂದ ಕಾರ‌್ಯದರ್ಶಿಯಾಗಿದ್ದಾರೆ. ಕೋರ್ಟ್ ಆದೇಶದನ್ವಯ ನಡೆದರೆ ಮಠದ ಪ್ರಗತಿ ಸಾಧ್ಯವಿದೆ ಎಂದರು.