ಜಿಲ್ಲೆ

ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಗಾಣಿಗ ಹತ್ಯೆ ಪ್ರಕರಣ, ಯಡಮೊಗೆ ಗ್ರಾಪಂ ಅಧ್ಯಕ್ಷ ಬಂಧನ

Udupi

ಕುಂದಾಪುರ: ಯಡಮೊಗೆ ಗ್ರಾಮ ಪಂಚಾಯಿತಿ ಹೊಸಬಾಳು ಬಳಿ ಶನಿವಾರ ರಾತ್ರಿ ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಗಾಣಿಗ(45)ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳೂರು 74 ಗ್ರಾಪಂ ಸದಸ್ಯರೊಬ್ಬರ ಮನೆಯಲ್ಲಿದ್ದ ಆರೋಪಿ ಪ್ರಾಣೇಶ್ ಯಡಿಯಾಳ್‌ನನ್ನು ಶಂಕರನಾರಾಯಣ ಪೊಲೀಸರು ತಡರಾತ್ರಿ ವಶಕ್ಕೆ ಪಡೆದಿದ್ದಾರೆ.

ಎನ್‌ಒಸಿ ವಿಚಾರದಲ್ಲಿ ಗಲಾಟೆ: ಉದಯ ಗಾಣಿಗ ಮತ್ತು ಯಡಮೊಗೆ ಗ್ರಾಪಂ ಅಧ್ಯಕ್ಷ ಪ್ರಾಣೇಶ ಯಡಿಯಾಳ ನಡುವೆ ಕೊಳವೆ ಬಾವಿಗೆ ಎನ್‌ಒಸಿ ನೀಡುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಬಳಿಕ ಪ್ರಾಣೇಶ ಯಡಿಯಾಳ ಅವರು ಪಂಚಾಯಿತಿ ವತಿಯಿಂದ ಎನ್‌ಒಸಿ ಕೊಟ್ಟಿದ್ದರು. ಈ ನಡುವೆ ಉದಯ ಗಾಣಿಗ ಅವರಿಗೆ ಯಡಿಯಾಳ ಹಾಗೂ ಬಾಲಚಂದ್ರ ಭಟ್ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಶನಿವಾರ ಮನೆಯಲ್ಲೇ ಇದ್ದ ಉದಯ ಗಾಣಿಗ ಅವರ ಮೊಬೈಲ್‌ಗೆ ರಾತ್ರಿ 8ರ ಸುಮಾರಿಗೆ ದೂರವಾಣಿ ಕರೆ ಬಂದಿದ್ದು, ಮನೆಯಿಂದ ಹೊರಗೆ ಬರುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಅದರನ್ವಯ ಉದಯ್ ಬೈಕ್‌ನಲ್ಲಿ ಮನೆ ಎದುರಿನ ರಸ್ತೆ ತನಕ ಹೋಗಿ ಅಲ್ಲಿ ರಸ್ತೆ ಬದಿ ನಿಂತಿದ್ದರು. ಈ ವೇಳೆ ಪ್ರಾಣೇಶ್ ಯಡಿಯಾಳ್ ಅವರಿದ್ದ ಕಾರು ಉದಯ್‌ಗೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ರಾಜೇಶ್ ಭಟ್ ಮತ್ತಿತರರು ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಪತಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಪ್ರಾಣೇಶ್ ಯಡಿಯಾಳ್, ರಾಜೇಶ್ ಭಟ್ ಹಾಗೂ ಇತರರು ಅವರನ್ನು ಕೊಲೆ ಮಾಡಿದ್ದಾಗಿ ಮೃತರ ಪತ್ನಿ ಜ್ಯೋತಿ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹತ್ಯೆಗೆ ಕುಮ್ಮಕ್ಕು ನೀಡಿದ ಆಪಾದನೆಯಡಿ ಬಾಲಚಂದ್ರ ಭಟ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪೂರ್ವದ್ವೇಷದಿಂದ ಕೊಲೆ ಆರೋಪ

ಉದಯ ಗಾಣಿಗ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು, ಜಡ್ಕಲ್‌ನಲ್ಲಿ ರಸಗೊಬ್ಬರ ಅಂಗಡಿ ಹೊಂದಿದ್ದರು. ಬಿಜೆಪಿ ಕಾರ್ಯಕರ್ತನೂ ಆಗಿದ್ದ ಅವರು ಕೆಲ ದಿನಗಳಿಂದ ಲಾಕ್‌ಡೌನ್ ಹಾಗೂ ಜನರು, ಕೂಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದರು. ಲಾಕ್‌ಡೌನ್ ಹೆಸರಲ್ಲಿ ಊರಿಗೆ ಬೇಲಿ ಹಾಕುವ ಬದಲು ಆರೋಗ್ಯ ಕೇಂದ್ರದಲ್ಲಿ ಎಲ್ಲರಿಗೂ ಲಸಿಕೆ, ಸೋಂಕಿತರಿಗೆ ಬೆಡ್, ಬಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವಂತೆ ಯಡಮೊಗೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅವರು ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಉದಯ ಗಾಣಿಗ ಹಾಗೂ ಯಡಿಯಾಳ್ ನಡುವೆ ದ್ವೇಷ ಬೆಳೆದಿದ್ದು, ಅದೇ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.