ಜಿಲ್ಲೆ

ಮರ್ಡರ್: ಪತಿಯಿಂದಲೇ ಪತ್ನಿಯ ಕೊಲೆ

Gadag

ನರಗುಂದ: ಪತಿಯೇ ಪತ್ನಿಯನ್ನು ಮರ್ಡರ್ ಮಾಡಿ ಮೃತದೇಹವನ್ನು ಮುಚ್ಚಿಟ್ಟ ಪ್ರಕರಣ ಪಟ್ಟಣದಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಸವಿತಾ ವೀರನಗೌಡ ಪಾಟೀಲ (32) ಕೊಲೆಯಾದವರು. ನವೋದಯ ನಗರದ ನಿವಾಸಿ ವೀರನಗೌಡ ತೋಟನಗೌಡ ಪಾಟೀಲ (38) ಕೊಲೆ ಆರೋಪಿ.

ಬುಧವಾರ ಬೆಳಗ್ಗೆ ಬಡಾವಣೆಯಲ್ಲಿ ಬೀದಿನಾಯಿಗಳು ಮರಳಿನಲ್ಲಿ ಮುಚ್ಚಿಟ್ಟಿದ್ದ ಶವವನ್ನು ಪತ್ತೆ ಹಚ್ಚಿವೆ. ಕೊಲೆ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಸಿಪಿಐ ಮಲ್ಲಯ್ಯ ಮಠಪತಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಮರ್ಡರ್ ಗೆ ಕಾರಣವಾದ ಮಿಸ್ಡ್ ಕಾಲ್

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದ ಸವಿತಾ ಅವರಿಗೆ ಎಂಟು ವರ್ಷದ ಹಿಂದೆ ಮೊಬೈಲ್ ಫೋನ್‌ಗೆ ಬಂದ ಮಿಸ್ಡ್ ಕಾಲ್‌ನಿಂದ ವೀರನಗೌಡ ಪಾಟೀಲ ಪರಿಚಯವಾಗಿತ್ತು.

ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೀರನಗೌಡ ಹಾಗೂ ಸವಿತಾ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ 6 ವರ್ಷದ ಮಗಳಿದ್ದಾಳೆ.

ಇಬ್ಬರೂ ವರ್ಷದ ಹಿಂದೆ ನರಗುಂದಕ್ಕೆ ಬಂದು ನೆಲೆಸಿದ್ದರು. ಪತಿಯ ವಿರೋಧದ ನಡುವೆಯೂ ಸವಿತಾ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇದೇ ವಿಷಯವಾಗಿ ಮನೆಯಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಸೋಮವಾರ ರಾತ್ರಿ 11ರ ನಂತರ ಸವಿತಾ ಯಾರೋ ಪರಿಚಯದವರ ಬೈಕ್‌ನಲ್ಲಿ ಮನೆಗೆ ಬಂದಿದ್ದರು.

ಇದೇ ವಿಷಯಕ್ಕೆ ನಡುವೆ ಪರಸ್ಪರ ವಾಗ್ದಾದ ನಡೆದಿತ್ತು. ಪತ್ನಿಯ ಕತ್ತು ಹಿಸುಕಿ ಹಿಸುಕಿ ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ಮರಳಿನಲ್ಲಿ ಶವ ಮುಚ್ಚಿಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯಾರಿಗೂ ಅನುಮಾನ ಬಾರದಿರಲಿ ಎಂದು ಪತ್ನಿ ಸವಿತಾ ಕಾಣೆಯಾಗಿದ್ದಾಳೆ ಎಂದು ವೀರನಗೌಡ ಪಾಟೀಲ ನರಗುಂದ ಪೊಲೀಸರಿಗೆ ದೂರು ನೀಡಿದ್ದ. ‘ಆರೋಪಿ ತಾನೇ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಸಿಪಿಐ ಮಲ್ಲಯ್ಯ ಮಠಪತಿ ಮಾಹಿತಿ ನೀಡಿದ್ದಾರೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.