ಹುಬ್ಬಳ್ಳಿ: ಕೊಲೆ ಮಾಡುವ ಬೆದರಿಕೆ ಹಾಕಿದ್ದಲ್ಲದೇ ನಮ್ಮ ಮನೆಯ ಸುತ್ತಮುತ್ತ ಓಡಾಡಿರುವ ಸಾಧಿಕ್ ರಾಯ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಇಲ್ಲಿಯ ಮಲ್ಲಿಕಾರ್ಜುನ ಸತ್ತಿಗೇರಿ ಎಂಬುವವರು ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರಿಚಯಸ್ಥ ಮಹಿಳೆಯೊಬ್ಬರ ಮಗಳು ಅಪ್ರಾಪ್ತೆ ಇದ್ದಾಗ ಪ್ರೀತಿಸುತ್ತಿದ್ದ ಸಾಧಿಕ್ ವಿರುದ್ಧ ದೂರು ನೀಡಲಾಗಿತ್ತು. ಜೈಲು ಸೇರಿ ಹೊರ ಬಂದಿದ್ದ ಸಾಧಿಕ್, ಪ್ರೀತಿಸುತ್ತಿದ್ದವಳನ್ನು ಬಲವಂತವಾಗಿ ಮದುವೆಯಾಗಿದ್ದ. ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಮದುವೆಯಾದ ಯುವತಿ ದೂರಿದ್ದಳು. 2024ರಲ್ಲಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೇ ಸೇಡು ಇಟ್ಟುಕೊಂಡಿರುವ ಸಾಧಿಕ್ ಕಳೆದ ಎರಡು ದಿನದಿಂದ ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾನೆ. ನನ್ನ ಹಿಂಬಾಲಿಸುತ್ತಿದ್ದಾನೆ. ನನ್ನ ಗೆಳೆಯನಿಗೆ ಫೋನ್ ಮಾಡಿ ಮಲ್ಲಿಕಾರ್ಜುನ ಸತ್ತಿಗೇರಿಯಿಂದ ತನ್ನ ಕುಟುಂಬ ಬೀದಿಗೆ ಬಂದಿದೆ ಎಂದು ಹೇಳಿಕೊಂಡಿದ್ದು, ಮುಗಿಸಲು ಮಂಗಳೂರಿನಿಂದ ಆದೇಶವಾಗಿದೆ ಎಂದು ಹೇಳಿರುವುದು ರೆಕಾರ್ಡ್‌ನಲ್ಲಿದೆ. ಕೂಡಲೇ ಸಾಧಿಕ್ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮಲ್ಲಿಕಾರ್ಜುನ ವಿವರಿಸಿದ್ದಾರೆ.