ಹರಪನಹಳ್ಳಿಯ ತಹಸೀಲ್ದಾರ್ ಎಂ.ಎಲ್. ನಂದೀಶ್‌ಗೆ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ಅತ್ಯಾಚಾರ, ಕೊಲೆ ಮಾಡಿದವರಿಗೆ ಶಿಕ್ಷೆ ವಿಧಿಸಿ: ಹರಪನಹಳ್ಳಿಯಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘ ಪ್ರತಿಭಟನೆ

ಹರಪನಹಳ್ಳಿ: ಬಂಜಾರ ಸಮುದಾಯದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ಪದಾಧಿಕಾರಿಗಳು ಶನಿವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಂ.ಎಲ್.ನಂದೀಶ್‌ಗೆ ಮನವಿ ಸಲ್ಲಿಸಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಂಡಾವೊಂದರಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿದ್ದು, ಹೇಯಕೃತ್ಯ. ಸಮುದಾಯದ ಯುವತಿ-ಅಪ್ರಾಪ್ತೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮೃತ ಬಾಲಕಿಯ ಕುಟುಂಬಕ್ಕೆ ತಕ್ಷಣವೇ 20 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬಕ್ಕೆ ಕಾನೂನಿನ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಕೆ.ಶಿವಕುಮಾರ್, ಉಪಾಧ್ಯಕ್ಷ ವಿನಯ್, ಮುಖಂಡರಾದ ಈಶ್ವರನಾಯ್ಕ, ವೆಂಕಿ, ಲಕ್ಯಾನಾಯ್ಕಾ, ವಿಶ್ವ, ಗಣೇಶ್, ಸಚಿನ್, ಸಂಜು ಇತರರಿದ್ದರು.