ಜಿಲ್ಲೆ

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ನಗರದ ಅಮರ ಕಾಲನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಬಿಜೆಪಿ ಮುಖಂಡ ಈಶ್ವರಗೌಡ ಪಾಟೀಲ ಸಹೋದರ ಸಂಬಂಧಿ, ಗೋಪನಕೊಪ್ಪ ನಿವಾಸಿ ಅಭಿಷೇಕ ರುದ್ರಗೌಡ ಪಾಟೀಲ (22) ಹತ್ಯೆಯಾದ ಯುವಕ. ಆರೋಪಿಗಳಾದ ಸಿದ್ದರಾಮ ನಗರದ ಪ್ರದೀಪ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್, ಅಶೋಕನಗರ ಠಾಣೆ ಇನ್​ಸ್ಪೆಕ್ಟರ್ ಅರುಣಕುಮಾರ ಸಾಳುಂಕೆ ಹಾಗೂ ಸಿಬ್ಬಂದಿ ಭೇಟಿ ನಿಡಿ ಪರಿಶೀಲಿಸಿದರು.

ಕಾರಿನ ಗಾಜು ಒಡೆದಿದ್ದ

ಈ ಹಿಂದೆ ಯಾವುದೋ ವಿಚಾರವಾಗಿ ಅಭಿಷೇಕ ಮತ್ತು ಪ್ರದೀಪ ನಡುವೆ ಜಗಳ ಉಂಟಾಗಿತ್ತು. ಇದೇ ವಿಚಾರವಾಗಿ ಪ್ರದೀಪ, ಅಭಿಷೇಕನ ಕಾರಿನ ಗಾಜು ಒಡೆದಿದ್ದ. ಈ ಕುರಿತು ಭಾನುವಾರ ರಾತ್ರಿ ಅಭಿಷೇಕ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿತ್ತು. ಆಕ್ರೋಶಗೊಂಡ ಪ್ರದೀಪ ಸಹಚರರನ್ನು ಕರೆಸಿಕೊಂಡು, ಚಾಕುವಿನಿಂದ ಅಭಿಷೇಕನ ಎದೆಯ ಕೆಳಭಾಗದಲ್ಲಿ ಬಲವಾಗಿ ಇರಿದು ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕನನ್ನು ಕಿಮ್ಸ್​ಗೆ ದಾಖಲಿಸಲಾಯಿತಾದರೂ ಆತ ಬದುಕಲಿಲ್ಲ. ಎಂದು ಬಿಜೆಪಿ ಹು-ಧಾ ಮಹಾನಗರ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ.