ಜಿಲ್ಲೆ

ಅತ್ಯಾಚಾರವೆಸಗಿ ಯುವತಿಯ ಕೊಲೆ

ಚಿತ್ರದುರ್ಗ: ತನ್ನನ್ನು ಪ್ರೀತಿಸುವಂತೆ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ ಯುವಕನೊಬ್ಬ,ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಎಸ್‌ಪಿ ಧರ್ಮೆಂದ್ರಕುಮಾರ್ ಮೀನಾ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಘಟನೆಯ ವಿವರ ನೀಡಿದ ಅವರು, ಚಿತ್ರದುರ್ಗ ತಾಲೂಕು ಹುಲ್ಲೂರು ಗ್ರಾಮದ, ಮೈಸೂರು ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಅರ್ಪಿತಾಳನ್ನು ಅದೇ ಗ್ರಾಮದ ಅಜೇಯ್‌ಕುಮಾರ್ (25) ನನ್ನನ್ನು ಪ್ರೀತಿಸು, ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ.

ಅ.1ರಂದು ಮೈಸೂರಿಂದ ಹಿಂತಿರುಗುತ್ತಿದ್ದ ಆಕೆಯನ್ನು ಮಿನಿಗೂಡ್ಸ್ ವಾಹನದಲ್ಲಿ ಅಪಹರಿಸಿ, ಚಿತ್ರದುರ್ಗ ಹೊರವಲಯದಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿ, ಆಯುಧದಿಂದ ತಲೆಗೆ ಹೊಡೆದು, ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾನೆ ಎಂದು ಹೇಳಿದರು.

ಈ ಕುರಿತಂತೆ ಮಹಿಳಾ ಠಾಣೆಗೆ ಅ.4ರಂದು ಯುವತಿ ತಂದೆ ಹನುಮಂತಪ್ಪ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲೇ ದಾವಣಗೆರೆಯಿಂದ ಅರ್ಪಿತಾಳನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದಿದ್ದು ಅ.6ರಂದು ಮೃತಪಟ್ಟಿದ್ದಾಳೆ. ಈಗ ಕೊಲೆ ಪ್ರಕರಣವನ್ನೂ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದರು.

ಈ ಕೃತ್ಯ ಅ.1ರಿಂದ 2ರೊಳಗೆ ನಡೆದಿದೆ. 2ರಂದು ರಾತ್ರಿ ಅರ್ಪಿತಾಳನ್ನು ಮೊದಲು ನಗರದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದ್ದು,ನಂತರ ದಾವಣಗೆರೆಗೆ ಕರೆದುಕೊಂಡು ಹೋಗಲಾಗಿದೆ. ಅರ್ಪಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣದಿಂದಾಗಿ ಮರಣಪೂರ್ವ ಹೇಳಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲವೆಂದು ಎಸ್‌ಪಿ ಹೇಳಿದರು.