ಚಂದ್ರಹಾಸ 
ಜಿಲ್ಲೆ

ಹಣಕಾಸು ವಿಚಾರವಾಗಿ ಯುವಕನ ಕೊಲೆ

ಅಭಿನಯ್ ಎಚ್.ಎಂ

ಕೆ.ಆರ್.ನಗರ: ತಾಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ಹಣಕಾಸು ವಿಚಾರವಾಗಿ ಯುವಕನನ್ನು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ರಾಜೇಗೌಡರ ಪುತ್ರ ಚಂದ್ರಹಾಸ (35) ಕೊಲೆಯಾದವ.

ಚಂದ್ರಹಾಸ ಹಣಕಾಸು ವ್ಯವಹಾರ ನಡೆಸುತ್ತಿದ್ದು ಇದರಿಂದ ಬಂದ ಹಣವನ್ನು ಆರೋಗ್ಯಕ್ಕೆ ಖರ್ಚು ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಸಿದ್ದನಕೊಪ್ಪಲು ಗ್ರಾಮದ ಚಾಟಿ ಪಾಪಣ್ಣ ನನಗೆ ಸಾಲ ಕೊಡಬೇಕಿದ್ದು, ವಸೂಲಿ ಮಾಡಿಕೊಂಡು ಬರುತ್ತೇನೆಂದು ಸೋಮವಾರ ರಾತ್ರಿ ತಾಯಿ ಸರೋಜಮ್ಮ ಅವರಿಗೆ ಹೇಳಿ ಹೋಗಿದ್ದಾನೆ. ಆದರೆ ಮಂಗಳವಾರ ಬೆಳಗ್ಗೆ ಚಂದ್ರಹಾಸ ಕೊಲೆಯಾಗಿರುವ ಬಗ್ಗೆ ಸಿದ್ದನಕೊಪ್ಪಲು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬಳಿಕ ಕುಟುಂಬಸ್ಥರು ಸಿದ್ದನಕೊಪ್ಪಲು ಗ್ರಾಮದ ಅರಳಿಕಟ್ಟೆ ಬಳಿ ಹೋಗಿ ನೋಡಲಾಗಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಮೃತನ ಚಿಕ್ಕಪ್ಪನ ಮಗ ಕಾರ್ತಿಕ್ ತಿಳಿಸಿದ್ದು, ಸಿದ್ದನಕೊಪ್ಪಲು ಗ್ರಾಮದ ಚಾಟಿ ಪಾಪಣ್ಣ ಕೊಲೆ ಮಾಡಿದ್ದಾನೆ ಎಂದು ಕೆ.ಆರ್.ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ನಾಗೇಶ್, ಡಿವೈಎಸ್‌ಪಿ ಕರೀಂ ರಾವ್‌ತರ್, ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್.ಶಿವಪ್ರಕಾಶ್ ಸ್ಥಳ ಪರೀಶಿಲಿಸಿದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಪ್ರಕರಣ ಸಂಬಂಧ ಒಬ್ಬನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.