ಜಿಲ್ಲೆ

ಸಿಗರೇಟ್ ಸೇದುವ ವಿಚಾರಕ್ಕೆ ಯುವಕನ ಕೊಲೆ, ರಸ್ತೆಯಲ್ಲಿ ಧೂಮಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ

ನೆಲಮಂಗಲ: ಸಿಗರೇಟ್ ಸೇದುವ ವಿಚಾರಕ್ಕೆ ಆರಂಭವಾದ ಯುವಕರ ಗಲಾಟೆಯಲ್ಲಿ ಒಬ್ಬ ಕೊಲೆಯಾಗಿದ್ದಾನೆ.
 ನಗರದ ಜಯನಗರ ನಿವಾಸಿ ಅರುಣ್ (25) ಮೃತ. ಬೆಂಗಳೂರು ಬನಶಂಕರಿ 2ನೇ ಹಂತ ಯರಪ್ಪನಪಾಳ್ಯ ನಿವಾಸಿಗಳಾದ ಸಲ್ಮಾನ್ (22), ಇಮ್ರಾನ್ (21), ಸುಝೈನ್ (24) ಬಂಧಿತರು.
 ಬುಧವಾರ ರಾತ್ರಿ 11 ಗಂಟೆಯಲ್ಲಿ ಜಯನಗರ ಬಳಿಯ ಬೇಕರಿ ಬಳಿ ಮೂವರು ಅಪರಿಚಿತರು ಸಿಗರೇಟ್ ಸೇದುತ್ತಿದ್ದುದನ್ನು ಕಂಡು, ಸ್ಥಳೀಯರಾದ ಅವಿನಾಶ್ ಮತ್ತು ರವಿಕುಮಾರ್ ಪ್ರಶ್ನೆ ಮಾಡಿದಾಗ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಮನೆಗೆ ತೆರಳುತ್ತಿದ್ದ ಅರುಣ್ ಎಂಬಾತನನ್ನು ಪರಿಚಯವಿದ್ದ ಅವಿನಾಶ್ ಮತ್ತು ರವಿಕುಮಾರ್ ಕರೆದಿದ್ದಾರೆ. ಪುನಃ ಜಗಳ ತಾರಕಕ್ಕೇರಿದ್ದು, ಅರುಣ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅರುಣ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಸಾವನ್ನಪ್ಪಿದ್ದಾನೆ. ಮೃತ ಅರುಣ್ ಸೋದರ ಮಾವ ಬೆಟ್ಟಸ್ವಾಮಿ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ಆರೋಪಿಗಳ ಬಂಧನ: ಎಸ್‌ಐ ಮಂಜುನಾಥ್ ನೇತೃತ್ವದ ತಂಡ ತಡರಾತ್ರಿಯೇ ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ. ನಗರದಲ್ಲಿದ್ದ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಘಟನೆ ನಡೆದಿರುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಪೊಲೀಸ್ ವರಿಷ್ಠಾಧಿಕಾರಿ ಭೇಟಿ: ಹತ್ಯೆಯಾಗಿರುವ ವಿಚಾರ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಅಪರ ಪೊಲೀಸ್ ಅಧೀಕ್ಷಕ ಸಜೀತ್, ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಕೆ.ಪಿ.ಸತ್ಯನಾರಾಯಣ್, ಸಬ್‌ಇನ್‌ಸ್ಪೆಕ್ಟರ್ ವಿ.ಅಂಜನ್‌ಕುಮಾರ್, ಡಿ.ಆರ್.ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.