ಜಿಲ್ಲೆ

ಬಂಟ್ವಾಳದಲ್ಲಿ ಮತ್ತೊಬ್ಬ ರೌಡಿಶೀಟರ್‌ ಕೊಲೆ

Dakshina Kannada

ಬಂಟ್ವಾಳ: ಮೆಲ್ಕಾರ್ ಸಮೀಪದ ಗುಡ್ಡೆ ಅಂಗಡಿ ಬಳಿಯ ಬೋಗುಡಿ ಎಂಬಲ್ಲಿ ಶುಕ್ರವಾರ ಸಾಯಂಕಾಲ ರೌಡಿಶೀಟರ್‌ನನ್ನು ಮಾರಾಕಾಯುಧದಿಂದ ಕಡಿದು ಹತ್ಯೆ ಮಾಡಲಾಗಿದೆ.

ಕಲ್ಲಡ್ಕ ನಿವಾಸಿ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (35) ಕೊಲೆಯಾದ ವ್ಯಕ್ತಿ. ಉಮ್ಮರ್ ಫಾರೂಕ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳ ತಂಡ ಆಗಮಿಸಿ ತಲವಾರುಗಳಿಂದ ದಾಳಿ ನಡೆಸಿ ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಫಾರೂಕ್‌ನನ್ನು ಸ್ಥಳೀಯರು ಪೊಲೀಸ್ ಜೀಪಿನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಫಾರೂಕ್ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ಸಂಬಂಧಿಸಿ ಹಲವು ಪ್ರಕರಣಗಳು ಬಂಟ್ವಾಳ ಠಾಣೆಯಲ್ಲಿ ದಾಖಲಾಗಿವೆ. ಉಮರ್ ಫಾರೂಕ್ ಮತ್ತು ಮೂಲತಃ ಕಲ್ಲಡ್ಕದ, ಪ್ರಸಕ್ತ ನಂದಾವರದಲ್ಲಿ ವಾಸವಿರುವ ಮತ್ತೋರ್ವ ರೌಡಿ ಶೀಟರ್ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಕೆಲವು ಸಮಯದಿಂದ ಇವರಿಬ್ಬರೂ ಮುನಿಸಿಕೊಂಡಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಆಗಾಗ ಮೊಬೈಲ್ನಲ್ಲಿ ಮಾತಿನ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಉಮರ್ ಫಾರೂಕ್ ನಂದಾವರ ನಿವಾಸಿ ರೌಡಿ ಶೀಟರ್‌ನ ತಂದೆಯ ಹೊಟೇಲ್ಗೆ ಹೋಗಿ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ರೌಡಿ ಶೀಟರ್ ಮತ್ತಾತನ ತಂಡ ಶುಕ್ರವಾರ ಸಂಜೆ ಉಮರ್‌ನನ್ನು ನಂದಾವರಕ್ಕೆ ಬರುವಂತೆ ಕರೆದು ಮೇಲ್ಕಾರ್ ಬಳಿಯ ಬೋಗೋಡಿಯಲ್ಲಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಗಾಂಜಾ ವ್ಯವಹಾರ ಕಾರಣವೇ?

ಫಾರೂಕ್ ಮತ್ತು ಆತನ ತಂಡ ಗಾಂಜಾ ವ್ಯವಹಾರ ನಡೆಸುತ್ತಿದ್ದು ಇತ್ತೀಚಿನ ಕೆಲ ದಿನಗಳ ಹಿಂದೆ ಸ್ನೇಹಿತರ ಮಧ್ಯೆ ಇದೇ ವಿಚಾರದಲ್ಲಿ ವೈಷಮ್ಯ ಏರ್ಪಟ್ಟಿತ್ತು. ಬಳಿಕ ಫಾರೂಕ್‌ನಿಂದ ದೂರವಾಗಿದ್ದ ಆತನ ಸ್ನೇಹಿತನೇ ಈ ಕೊಲೆ ನಡೆಸಿರಬಹುದು ಎನ್ನುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರೇ ದಿನದಲ್ಲಿ ಮತ್ತೊಂದು ಮರ್ಡರ್

ಮಂಗಳವಾರವಷ್ಟೇ ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ಚಿತ್ರನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆಯಾಗಿತ್ತು. ಈ ಘಟನೆ ನಡೆದು ಮೂರೇ ದಿನದಲ್ಲಿ ಮತ್ತೊಂದು ಕೊಲೆ ನಡೆದಿರುವುದು ಕರಾವಳಿಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸೈ ಪ್ರಸನ್ನ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.