ಮೂಲ್ಕಿ: ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಟ್ಟಡದ ಎದುರು ಶುಕ್ರವಾರ ಸಾಯಂಕಾಲ ಎರಡು ತಂಡಗಳ ನಡುವೆ ಏರ್ಪಟ್ಟ ಜಗಳ ಉದ್ಯಮಿಯೋರ್ವರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮೂಲ್ಕಿ ಉದ್ಯಮಿ ಮುನೀರ್ ಕಾರ್ನಾಡ್ ಅವರ ಅಳಿಯ, ಮೂಲತಃ ಸುಳ್ಯ ತಾಲೂಕಿನ ಮುರುಳ್ಯದ ಕುಕ್ಕಟ್ಟೆ ನಿವಾಸಿಸುಲೈಮಾನ್ ಅವರ ಪುತ್ರ, ಮೂಡುಬಿದಿರೆಯಲ್ಲಿ ಅಲೈನ್ ಗೋಲ್ಡ್ ಮಳಿಗೆ ಹೊಂದಿರುವ ಅಬ್ದುಲ್ ಲತೀಫ್(30)ಮೃತಪಟ್ಟವರು.
ಮುನೀರ್ ಕಾರ್ನಾಡ್ ತಮ್ಮ ಪುತ್ರ ಹೈಯಾತ್ ಹಾಗೂ ಅಳಿಯ ಅಬ್ದುಲ್ ಲತೀಫ್ ಜತೆ ಬ್ಯಾಂಕಿಗೆ ಬಂದಿದ್ದು, ಲತೀಫ್ ಕಾರಿನಲ್ಲಿಯೇ ಕುಳಿತುಕೊಂಡಿದ್ದರು. ಮುನೀರ್ ಕಾರ್ನಾಡ್ ಬ್ಯಾಂಕಿನಿಂದ ಹೊರ ಬಂದಾಗ ತಂಡವೊಂದು ಅವರ ಜತೆ ಜಗಳಕ್ಕಿಳಿಯಿತು. ಜಗಳ ತಾರಕ್ಕೇರಿದಾಗ ಅಬ್ದುಲ್ ಲತೀಫ್ ಜಗಳ ಬಿಡಿಸಲು ಕಾರಿನಿಂದ ಇಳಿದರು. ಈ ಸಂದರ್ಭ ಆರೋಪಿಗಳು ಲತೀಫ್ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿತು. ಗಂಭೀರ ಗಾಯಗೊಂಡಿದ್ದ ಅವರು ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮುನೀರ್ ಕಾರ್ನಾಡ್ ಮತ್ತು ಹೈಯಾತ್‌ಗೂ ಗಾಯಗಳಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಲತೀಫ್ ಮೂಡುಬಿದಿರೆಯಲ್ಲಿ ಎಲ್ಲರೊಂದಿಗೂ ಆತ್ಮೀಯರಾಗಿದ್ದರು. 2 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರ ಪತ್ನಿ ಮೂಡುಬಿದಿರೆಯಲ್ಲಿ ವಕೀಲರಾಗಿದ್ದಾರೆ. ದಂಪತಿಗೆ ಒಂದುವರೆ ವರ್ಷದ ಮಗುವಿದೆ. ಆರೋಪಿಗಳ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ.
ಹಿಂದೊಮ್ಮೆ ರಾಜಿಯೂ ಆಗಿತ್ತು!
ಮುನೀರ್ ಕಾರ್ನಾಡ್ ಜತೆಗಿನ ಹಳೇ ದ್ವೇಷದ ಪರಿಣಾಮ ಎರಡು ತಂಡಗಳ ನಡುವೆ ಇಲ್ಲಿ ಆಗಿಂದಾಗ್ಗೆ ಗಲಾಟೆ ನಡೆಯುತ್ತಿದ್ದವು. ಲಾಕ್‌ಡೌನ್ ಸಂದರ್ಭವೂ ತಂಡಗಳ ನಡುವೆ ಗಲಾಟೆಯಾಗಿ ಬಳಿಕ ರಾಜಿಯಲ್ಲಿ ಮುಕ್ತಾಯಗೊಂಡಿತ್ತು. ಶುಕ್ರವಾರ ಎರಡು ತಂಡಗಳ ನಡುವೆ ಮತ್ತೆ ಗಲಾಟೆಯಾಯಿತು. ಡಿಸಿಪಿ ಅರುಣಾಂಶುಗಿರಿ, ಡಿಸಿಪಿ ಲಕ್ಷ್ಮಿಗಣೇಶ್, ಎಸಿಪಿ ಬೆಳ್ಳಿಯಪ್ಪ, ಮೂಲ್ಕಿ ನಿರೀಕ್ಷಕ ಜಯರಾಂ ಗೌಡ, ಸಿಪಿಐ ಶೀತಲ್ ಅಲಗೂರು ಮತ್ತು ದೇಜಪ್ಪ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.