ಜಿಲ್ಲೆ

ಕೊಲೆ ಸಂಚಿನಲ್ಲಿ ಬೆಂಗಳೂರು ಮೂಲದ ಪ್ರಬಲ ವ್ಯಕ್ತಿ !

ತುಮಕೂರು: ನನ್ನ ಕೊಲೆಗೆ ಸುಪಾರಿ ಕೊಟ್ಟಿರುವ ಬಗ್ಗೆ ಎಂಎಲ್ಸಿ ಆರ್​.ರಾಜೇಂದ್ರ ಶುಕ್ರವಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ರನ್ನು ಭೇಟಿ ಮಾಡಿ ಸಾಕ್ಷ್ಯ ಒದಗಿಸುವ "ಪೆನ್ ಡ್ರೈವ್​' ಸಮೇತ ಲಿಖಿತ ದೂರನ್ನು ಸಲ್ಲಿಸಿದರು.

ಎಸ್ಪಿ ಸಲಹೆಯಂತೆ ಘಟನೆ ನಡೆದ ವ್ಯಾಪ್ತಿಗೆ ಬರುವ ಕ್ಯಾತಸಂದ್ರ ಠಾಣೆಗೆ ತೆರಳಿ ರಾಜೇಂದ್ರ ದೂರು ನೀಡಿದರು. ಈ ದೂರಿನಲ್ಲಿ ಸಿಎಂ ಆಪ್ತ ಬೆಂಬಲಿಗರಾದ ನಮ್ಮ ತಂದೆ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹಾಗೂ ದೂರುದಾರನಾದ ನನ್ನ ವಿರುದ್ಧ ಬಲವಾದ ರಾಜಕೀಯ ದ್ವೇಷವನ್ನು ಕೆಲವು ಉನ್ನತ ರಾಜಕಾರಣಿಗಳು ಹೊಂದಿದ್ದು, ಬೆದರಿಕೆ, ಕ್ರಿಮಿನಲ್​ ಒಳಸಂಚು ಹಾಗೂ ಆಮಿಷಗಳ ಮಾರ್ಗದಿಂದ ರಾಜಕೀಯವಾಗಿ ಸಂಚು ರೂಪಿಸುತ್ತಾರೆ ಎಂದು ದೂರಿದ್ದಾರೆ.

ಬೆಂಗಳೂರು ಮೂಲದ ಪ್ರಬಲ ವ್ಯಕ್ತಿಗಳು ಈ ಪಿತೂರಿ ನಡೆಸಿದ್ದು ಈ ಕೊಲೆ ಸಂಚಿಗೆ 70 ಲಕ್ಷ ರೂ., ಸುಪಾರಿ ಕೊಟ್ಟಿದ್ದು ದುಷ್ಕರ್ಮಿಗಳಿಗೆ 5 ಲಕ್ಷ ರೂ., ಮುಂಗಡವಾಗಿ ಕೊಟ್ಟಿರುವುದು ಆಡಿಯೋ ಸಂಭಾಷಣೆಯಲ್ಲಿರುವುದನ್ನು ದೂರಿನಲ್ಲಿ ರಾಜೇಂದ್ರ ಉಲ್ಲೇಖಿಸಿರುವುದು ಕುತೂಹಲಕಾರಿ ಅಂಶವೆನಿಸಿದೆ.