ಬೆಂಗಳೂರು: ಬನಶಂಕರಿ 6ನೇ ಹಂತದಲ್ಲಿರುವ ಗುಬ್ಬಲಾಳ ರಸ್ತೆಯಲ್ಲಿನ ಕಟ್ಟಡದಲ್ಲಿ ಮಲಗಿದ್ದ ಕೂಲಿ ಕಾರ್ವಿುಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಬನಶಂಕರಿ ನಿವಾಸಿ ಬಿಹಾರ ಮೂಲದ ನಾರಾಯಣ ಷಾ (38) ಕೊಲೆಯಾದ ವ್ಯಕ್ತಿ.
ಸ್ನೇಹಿತನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ. ನಾರಾಯಣ ಆರು ಸ್ನೇಹಿತರ ಜತೆ ಗುಬ್ಬಲಾಳ ರಸ್ತೆಯಲ್ಲಿ ಕಟ್ಟಡ ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದ. ಮಂಗಳವಾರ (ಏ.7) ರಾತ್ರಿ ಊಟ ಮಾಡಿ, ಮೊದಲ ಮಹಡಿಯಲ್ಲಿ ಮಲಗಿದ್ದ. ಆತನ ಸ್ನೇಹಿತರು ಕೆಳಮಹಡಿಯಲ್ಲಿ ಮಲಗಿದ್ದರು. ರಾತ್ರಿ 11.30ರಲ್ಲಿ ನಾರಾಯಣ ಕಿರುಚಾಡಿದ್ದು, ಸ್ಥಳಕ್ಕೆ ಹೋಗಿ ನೋಡಿದ್ದಾರೆ. ಈ ವೇಳೆ ಯಾರೋ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದರು.
ಕೂಡಲೇ ಆಸ್ಪತ್ರೆಗೆ ಜತೆಗಾರರು ಕರೆದೊಯ್ದರಾದರೂ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.