ಹುಬ್ಬಳ್ಳಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣ ಇಲ್ಲಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಕೊಪ್ಪಳ ಮೂಲದ ಸ್ಥಳೀಯ ನಿವಾಸಿಗಳಾದ ಶರಣಪ್ಪ ದಂಪತಿಯ ಎರಡನೇ ಮಗಳನ್ನು ಬಿಹಾರ ಮೂಲದ ಸುಮಾರು ನಲವತ್ತು ವರ್ಷದ ವ್ಯಕ್ತಿ ಅಪಹರಿಸಿ, ಕೊಲೆ ಮಾಡಿದ್ದಾನೆ. ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮಗುವಿನೊಂದಿಗೆ ತಾಯಿಯು ಮನೆಗೆಲಸಕ್ಕೆ ತೆರಳಿದ್ದರು. ಮನೆಯಂಗಳದಲ್ಲಿ ಮಗುವನ್ನು ಆಡಲು ಬಿಟ್ಟು, ತಾಯಿ ಕೆಲಸದಲ್ಲಿ ತೊಡಗಿದ್ದರು. ಇದೇ ವೇಳೆ ಸುಮಾರು ನಲವತ್ತು ವರ್ಷದ ವ್ಯಕ್ತಿ, ಐದು-ಹತ್ತು ನಿಮಿಷ ಮಗುವಿನ ಚಲನವಲನ ಗಮನಿಸುದ್ದಾನೆ. ಅಲ್ಲದೆ, ಒಂದು ಬಾರಿ ಮನೆಯಂಗಳಕ್ಕೆ ಹೋಗಿ, ಮಗುವಿನ ಕಿವಿಯಲ್ಲಿ ಏನೋ ಹೇಳಿದ್ದಾನೆ. ಅದಾದ ಕೆಲ ಹೊತ್ತಿನ ಬಳಿಕ ಮಗುವನ್ನು ಕಾಂಪೌಂಡ್ ಮೇಲಿಂದ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಪ್ರತಿಭಟನೆ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಬಿಹಾರ ಮೂಲದ ಆರೋಪಿಯನ್ನು ಎನ್‌ಕೌಂಟರ್ ಮಾಡಲು ಆಗ್ರಹಿಸಿ ವಿಜಯನಗರ, ಆದರ್ಶನಗರ, ಸಂತೋಷನಗರ, ದೇವಾಂಗಪೇಟೆ ಸೇರಿ ಸುತ್ತಮುತ್ತಲಿನ ನಿವಾಸಿಗಳು, ಇಲ್ಲಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಎನ್ನುವ ಬದಲು, ನಮ್ಮೆದುರಿಗೇ ಗುಂಡು ಹೊಡೆದು ಸಾಯಿಸಬೇಕು. ನಿಮ್ಮಿಂದ ಆಗದಿದ್ದರೆ, ಅವನನ್ನು ನಮಗೆ ಒಪ್ಪಿಸಿ, ನಾವೇ ತಕ್ಕ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು. ಹಿರಿಯ ಅಧಿಕಾರಿಗಳು ಸಮಾಧಾನ ಪಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು.
ಮಹಿಳಾ ಸಂಘಟನೆಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದವು. ಈ ವೇಳೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು, ನೂಕುನುಗ್ಗಲು ಏರ್ಪಟ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸ್ಥಳಕ್ಕೆ ಆಗಮಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಏನು ಕಾನೂನು ಕ್ರಮ ಕೈಗೊಳ್ಳುತ್ತೀರಿ ಎನ್ನುವುದನ್ನು ಬಹಿರಂಗಪಡಿಸಬೇಕು? ಎಂದು ಪಟ್ಟು ಹಿಡಿದರು. ಸೂಕ್ತ ಸ್ಪಂದನೆ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ, ಜನರು ಪ್ರತಿಭಟನೆ ಮುಂದುವರಿಸಿದರು.
ಕೆಲ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಮಾಡುತ್ತ ಠಾಣೆ ಎದುರು ಜಮಾಯಿಸಿದವು. ಟೈರ್‌ಗೆ ಬೆಂಕಿ ಹಚ್ಚಿ, ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದವು. ಪೊಲೀಸ್ ಆಯುಕ್ತರು ಸಮೇತ ಹಿರಿಯ ಅಧಿಕಾರಿಗಳು ನಾಲ್ಕೈದು ಸುತ್ತು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಮಧ್ಯಾಹ್ನ 2ರಿಂದ ಆರಂಭವಾದ ಪ್ರತಿಭಟನೆ ರಾತ್ರಿವರೆಗೂ ಮುಂದುವರಿಯಿತು.
ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲಾ, ನಿರಂಜನಯ್ಯ ಹಿರೇಮಠ, ಸಂತೋಷ ಚವ್ಹಾಣ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ಅನಿಲಕುಮಾರ ಪಾಟೀಲ, ಮಾರುತಿ ದೊಡ್ಡಮನಿ ಇತರರು ಪಾಲ್ಗೊಂಡಿದ್ದರು.