ರಿಷಿಕೇಶ ಸೋನಾವಣೆ, ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ  
ಜಿಲ್ಲೆ

ಕೊಲೆ ಪ್ರಕರಣ-ನಾಲ್ವರ ಬಂಧನ

ವಿಜಯಪುರ: ಕಳೆದೆರಡು ದಿನಗಳ ಹಿಂದೆ ನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಲಾಗಿದ್ದು, ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ ಸೋನಾವಣೆ ತಿಳಿಸಿದರು.

ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ರೋಹಿತ ಪವಾರ ಎಂಬ ಯುವಕನ ಹತ್ಯೆಯಾಗಿತ್ತು. ನಗರವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣದ ತನಿಖೆಗಾಗಿ ಸಿಪಿಐ ಮಲ್ಲಯ್ಯ ಮಠಪತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಚುರುಕಿನ ಕಾರ್ಯಾಚರಣೆ ನಡೆಸಿ ಸಿಂದಗಿ ತಾಲೂಕಿನ ಮೋರಟಗಿ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿದವರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸ್ಥಳೀಯ ನಿವಾಸಿ ಮುಜ್‌ಮಿಲ್ ಹಾಸೀಮ್‌ಖಾದ್ರಿ ಇನಾಮದಾರ (22), ರಾಜಾಜಿನಗರ ನಿವಾಸಿ ಸಾಯಿನಾಥ ಪರಶುರಾಮ ಪವಾರ (20), ಗಚ್ಚಿನಕಟ್ಟಿ ಕಾಲನಿ ನಿವಾಸಿ ಶರಣು ಶಿವಾನಂದ ಕುರಿ ಬಂಧಿತರು.

ಪ್ರಕರಣದ ವಿವರಣೆ

ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿ ರೋಹಿತ ಸುಭಾಸ ಪವಾರ ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲು ಕಾರಣ ಬಡ್ಡಿ ವ್ಯವಹಾರ. ಮುಜ್‌ಮಿಲ್ ಇನಾಮದಾರ 2 ಲಕ್ಷ ಮತ್ತು ಸಾಯಿನಾಥ ಪವಾರ 88 ಸಾವಿರ ರೂ. ಹಣವನ್ನು ಆನಂದನಗರದ ವಸಂತ ಚವಾಣ್ ಬಳಿ ತಿಂಗಳಿಗೆ 10 ರೂ. ಬಡ್ಡಿ ದರದಂತೆ ಪಡೆದಿದ್ದರು. ಆದರೆ ಅಸಲು ಮತ್ತು ಬಡ್ಡಿ ಹಣವನ್ನು ವಸಂತನಿಗೆ ಮರಳಿಸುತ್ತಿರಲಿಲ್ಲ. ಇದರಿಂದ ನೊಂದ ವಸಂತ, ಕೊಲೆಗೀಡಾದ ರೋಹಿತನಿಗೆ ಅಸಲಿ ಹಣ ಹಾಗೂ ಹೆಚ್ಚಿನ ಬಡ್ಡಿ ವಸೂಲಿ ಮಾಡಿಕೊಡಲು ಹೇಳಿದ್ದ.

ವಸಂತನ ಮಾತು ಕೇಳಿ ಕೊಲೆಗೀಡಾದ ರೋಹಿತ, ಹಣ ಹಾಗೂ ಬಡ್ಡಿ ನೀಡಲು ಆರೋಪಿಗಳಿಬ್ಬರಿಗೆ ಸತಾಯಿಸುತ್ತಿದ್ದ. ಅಲ್ಲದೇ, ಹೊಡೆದು, ಬಡಿದು, ಧಮಕಿ ನೀಡುತ್ತಿದ್ದ. ಇದಕ್ಕೆ ಸಿಟ್ಟಾದ ಆರೋಪಿಗಳೆಲ್ಲರೂ, ಈ ವಿಷಯವನ್ನು ಇನ್ನೊಬ್ಬ ಆರೋಪಿ ಖಾಲೀದ ಇನಾಮದಾರಗೆ ತಿಳಿಸಿದ್ದಾರೆ. ಆಗ ಖಾಲಿದ್, ರೋಹಿತನನ್ನೇ ಕೊಲೆ ಮಾಡಿ ಬಿಡಿ ಎಂದು ಕುಮ್ಮಕ್ಕು ನೀಡಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಈ ಕೊಲೆ ಸಂಚು ರೂಪಿಸಿ ರೋಹಿತ ಕಣ್ಣಿಗೆ ಖಾರದ ಪುಡಿ ಎರಚಿ, ಮೈತುಂಬಾ ಚಾಕುವಿನಿಂದ ಇರಿದು, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ್ದಲ್ಲದೇ, ರೋಹಿತ ಶವವನ್ನು ಮುಳ್ಳುಕಂಟಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸ್‌ಪಿ ಸೋನಾವಣೆ ತಿಳಿಸಿದರು.