ಜಿಲ್ಲೆ

ಮಗನ ಸಾಕ್ಷ್ಯದಿಂದ ತಂದೆಗೆ ಜೀವಾವಧಿ 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣ

vijayavani

ಬೆಂಗಳೂರು: ಹೆತ್ತ ತಾಯಿ ಕೊಲೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಅಪ್ರಾಪ್ತ ಮಗ ನೀಡಿದ ಹೇಳಿಕೆ ಪರಿಗಣಿಸಿದ 45ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಜೆ.ಪಿ. ನಗರ 8ನೇ ಹಂತದ ವಡ್ಡರಪಾಳ್ಯದ ಕೆಂಪರಾಜು (54) ಶಿಕ್ಷೆಗೆ ಗುರಿಯಾದವ. ಬಾಳೆಎಲೆ ವ್ಯಾಪಾರಿ ಕೆಂಪರಾಜು, 2015ರ ಮಾ.26ರಂದು ತನ್ನ ಪತ್ನಿ ಸುಗುಣಾ ಎಂಬಾಕೆಯನ್ನು ಕೊಲೆ ಮಾಡಿದ್ದ. ಅಪರಾಧಿಯ 16 ವರ್ಷದ ಪುತ್ರ ಸಾಗರ್ (ಈಗ 21 ವರ್ಷ) ನೋಡಿದ್ದ. ಈತ ಕೊಟ್ಟ ಹೇಳಿಕೆ ಮೇರೆಗೆ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿದೆ.

ಚಿಕ್ಕಬಳ್ಳಾಪುರ ಮೂಲದ ಕೆಂಪರಾಜು ಮತ್ತು ಕನಕಪುರದ ಸುಗುಣಾ ದಂಪತಿ 18 ವರ್ಷದ ಪುತ್ರಿ ಹಾಗೂ ಮಗನ ಜತೆ ನೆಲೆಸಿದ್ದರು. ತಾಯಿ, ಮಗಳು ಗಾರ್ವೆಂಟ್ಸ್ ಉದ್ಯೋಗಿಗಳಾಗಿದ್ದರು. ಪತ್ನಿ ಮತ್ತು ಮಗಳ ಶೀಲ ಶಂಕಿಸಿ ಪ್ರತಿದಿನ ಮನೆಯಲ್ಲಿ ಜಗಳ ಮಾಡಿ ಹಲ್ಲೆ ನಡೆಸುತ್ತಿದ್ದ.

ನೊಂದ ಪತ್ನಿ ತನ್ನ ಮಕ್ಕಳ ಜತೆಗೆ ಕನಕಪುರದಲ್ಲಿರುವ ತವರುಮನೆಗೆ ಹೋಗಿದ್ದರು. ಕೆಲ ದಿನಗಳ ಬಳಿಕ ಗಾರ್ವೆಂಟ್ಸ್​ನಲ್ಲಿ ವೇತನ ಪಡೆಯಲು ಮೂವರೂ ಜೆ.ಪಿ. ನಗರಕ್ಕೆ ಬಂದಾಗ ಮನೆಗೂ ಆಗಮಿಸಿದ್ದರು. ‘ತಪ್ಪಾಯಿತು.. ಮನೆ ಬಿಟ್ಟು ಹೋಗಬೇಡಿ’ ಎಂದು ಪತ್ನಿ ಮತ್ತು ಮಕ್ಕಳ ಕಾಲು ಹಿಡಿದು ಕೆಂಪರಾಜು ಬೇಡಿಕೊಟ್ಟಿದ್ದ.

ತಂದೆ ಮಾತು ನಂಬದ ಪುತ್ರಿ ಕನಕಪುರದ ಅಜ್ಜಿ ಮನೆಗೆ ಹಿಂದಿರುಗಿದ್ದಳು. ಮನೆಯಲ್ಲಿ ಒಂಟಿಯಾಗಿದ್ದ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿದ್ದ ವೇಳೆಗೆ ಪುತ್ರ ಬಂದಿದ್ದು, ಬಾಗಿಲು ತೆಗೆಯಲು ಯತ್ನಿಸಿದ್ದ. ಬಾಗಿಲು ಬಂದ್ ಆಗಿದ್ದರಿಂದ ಅಡುಗೆ ಮನೆಯ ಕಿಟಕಿಯಲ್ಲಿ ನೋಡಿದಾಗ ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಣ್ಣಾರೆ ನೋಡಿ ಕೂಗಿಕೊಂಡಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯಪುರ ಪೊಲೀಸರು ಕೆಂಪರಾಜುನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.

ತಾಳೆ ಆಗಿತ್ತು: ಕೊಲೆ ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಸಾಕ್ಷ್ಯ ಕಲೆ ಹಾಕಿದ್ದರು. ತಾಯಿಯ ಕೊಂದ ತಂದೆ ವಿರುದ್ಧ ಪುತ್ರ ಹೇಳಿಕೆ ನೀಡಿದ. ಈತನ ಹೇಳಿಕೆ ಹಾಗೂ ಶವದ ಮೇಲಿನ ಗುರುತು ತಾಳೆಯಾಗಿದ್ದವು. ಈ ಎಲ್ಲ ಸಾಕ್ಷ್ಯಗಳ ಆಧರಿಸಿ ಅಪರಾಧಿ ಎಂದು ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.