ಜಿಲ್ಲೆ

ಅನ್ಯ ಕೋಮಿನ ಯುವಕನ ಮೇಲೆ ತಲವಾರು ದಾಳಿ24 ಗಂಟೆಯೊಳಗೆ ಆರೋಪಿಗಳ ಬಂಧಿಸಿದ ಪೊಲೀಸರು

ಮಂಗಳೂರು: ಅನ್ಯಕೋಮಿನ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ 24 ಗಂಟೆಯಲ್ಲಿ ತಲವಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಆ.20ರಂದು ಕಾವೂರಿನ ಖಾಸಗಿ ಕಾಲೇಜಿನ ಎದುರು ದೂರುದಾರರು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಉರುಂಡಾಡಿ ಗುಡ್ಡೆಯ ಚರಣ್ (23), ಸುಮಂತ್ ಬರ್ಮನ್ (24) ಹಾಗೂ ಕೋಡಿಕಲ್‌ನ ಅವಿನಾಶ್ (24) ಎಂಬವರು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ತಲವಾರು ಬೀಸಿದ್ದರು. ಆಗ ಅನ್ಯಕೋಮಿನ ದೂರುದಾರರು ತಪ್ಪಿಸಿಕೊಂಡಿದ್ದು, ಆದರೆ ಮುಖಕ್ಕೆ ಗಾಯವಾಗಿತ್ತು. ಈ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ತಲವಾರು, ವಾಹನ ವಶಪಡಿಸಲಾಗಿದೆ.


ಆರೋಪಿಗಳ ಪೈಕಿ ಚರಣ್ ರಾಜ್ ಯಾನೆ ಚರಣ್ ವಿರುದ್ಧ ಉರ್ವ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ತಲಾ 1, ಕಾವೂರಿನಲ್ಲಿ 3 ಪ್ರಕರಣ ಸೇರಿ ಒಟ್ಟು 5 ಪ್ರಕರಣ ದಾಖಲಾಗಿತ್ತು. ಹೊಸಬೆಟ್ಟುವಿನ ಸುಮಂತ್ ಬರ್ಮನ್ ಮೇಲೆ ಪಣಂಬೂರು ಹಾಗೂ ಬರ್ಕೆಯಲ್ಲಿ ತಲಾ 1, ಕಾವೂರಿನಲ್ಲಿ 2 ಸೇರಿ ಒಟ್ಟು 4 ಕೇಸ್, ಅವಿನಾಶ್ ವಿರುದ್ಧ ಉರ್ವದಲ್ಲಿ 4 ಹಾಗೂ ಕಂಕನಾಡಿ ಠಾಣೆಯಲ್ಲಿ 1 ಸೇರಿ ಒಟ್ಟು 5 ಪ್ರಕರಣ ದಾಖಲಾಗಿದೆ. ಪ್ರಸ್ತತ ಈತನನ್ನು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಗಡಿಪಾರಿಗೆ ಆದೇಶ ಮಾಡಲಾಗಿದೆ.


ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹಾಗೂ ಡಿಸಿಪಿಗಳಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ಸಲಹೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.