Gavel on desk. Isolated with good copy space. Dramatic lighting. 
ಜಿಲ್ಲೆ

ಕೊಲೆ ಯತ್ನ ಸಾಬೀತು ಅಪರಾಧಿಗೆ 18 ವರ್ಷ ಶಿಕ್ಷೆ

ಹರೀಶ ಎಂ.

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಗಂಬಿಲ ಬಳಿ ರಸ್ತೆಯಲ್ಲಿ ಪಾದಚಾರಿ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಅಸಭ್ಯವಾಗಿ ವರ್ತಿಸಿ ಆಕೆಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿ, ಬಳಿಕ ತಾನೂ ಕುತ್ತಿಗೆ ಹಾಗೂ ಕೈಗೆ ಇರಿದುಕೊಂಡ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸುಶಾಂತ್ ಯಾನೇ ಶಾನ್ (31) ಎಂಬುವನಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ( ವಿಶೇಷ) ನ್ಯಾಯಾಲಯ 18 ವರ್ಷ 1 ತಿಂಗಳ ಸಜೆ ಪ್ರಕಟಿಸಿದೆ.


2019ರ ಜೂ.28ರಂದು ಘಟನೆ ನಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರೂ ಚೇತರಿಕೆ ಕಂಡಿದ್ದರು. ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಒಟ್ಟು 21 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಸುಶಾಂತ್ ಮೇಲೆ ಹೊರಿಸಲಾದ ಎಲ್ಲ ಶಿಕ್ಷಾರ್ಹ ಕಲಂಗೆ ಅಪರಾಧಿ ಎಂದು ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ತೀರ್ಪು ಪ್ರಕಟಿಸಿದ್ದಾರೆ.


ದಂಡ ರೂಪದಲ್ಲಿ ವಸೂಲಾಗುವ 2 ಲಕ್ಷ ರೂ. ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಲಾಗಿದೆ. ಸಂತ್ರಸ್ತೆ ಪರ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದರು.