ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಜಂಕ್ಷನ್‌ನಲ್ಲಿ ಶನಿವಾರ ನಡೆದ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು, ಆರೋಪಿಯಾಗಿರುವ ಅಂಗಡಿ ಮಾಲೀಕ ತೌಸಿಫ್ ಹುಸೇನ್ ಕಾರ್ಮಿಕ ಗಜ್ವಾನ್ ಆಲಿಯಾಸ್ ಜಗ್ಗುನ ತಲೆಗೆ ದೊಣ್ಣೆಯಿಂದ ಹೊಡೆದು ಅನಂತರ ಪೆಟ್ರೋಲ್ ಹಾಕಿ ಸುಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಗಜ್ವಾನ್ ಸುಮಾರು ಮೂರು ವರ್ಷಗಳಿಂದ ತೌಸಿಫ್‌ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಂಗಡಿ ಪಕ್ಕದಲ್ಲೇ ಇರುವ ಶೆಡ್‌ನಂತಹ ಜಾಗದಲ್ಲಿ ಮಲಗುತ್ತಿದ್ದ. ತೌಸಿಫ್ ಆಗಾಗ್ಗೆ ಗಜ್ವಾನ್‌ನ್ನು ಹಿಂಸಿಸುತ್ತಿದ್ದ. ಶನಿವಾರ ಬೆಳಗ್ಗೆ ಕೂಡ ತೌಸಿಫ್ ಗಜ್ವಾನ್‌ನ ಮೇಲೆ ಹಲ್ಲೆ ನಡೆಸಿದ್ದ. ದೊಣ್ಣೆಯ ಪೆಟ್ಟಿನಿಂದ ಪ್ರಜ್ಞೆ ಕಳೆದುಕೊಂಡಿದ್ದ ಗಜ್ವಾನ್‌ನನ್ನು ಶೆಡ್‌ಗೆ ಸಾಗಿಸಿ ಅಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅನಂತರ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸಿ ಅಲ್ಲಿ ವಿದ್ಯುತ್ ಶಾಕ್ ಹೊಡೆಯಿತು ಎಂದು ಸುಳ್ಳು ಹೇಳಿದ್ದ. ಮಾಹಿತಿ ಪಡೆದ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದರು. ತೌಸಿಫ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಆರೋಪಿ ಬಾಯಿ ಬಿಟ್ಟಿರಲಿಲ್ಲ. ಅನಂತರ ತನಿಖೆ ಚುರುಕುಗೊಳಿಸಿ ಹಲವರನ್ನು ವಿಚಾರಿಸಿದಾಗ ನಿಜ ವಿಚಾರ ಗೊತ್ತಾಯಿತು. ಅಷ್ಟರ ವೇಳೆಗೆ ತೌಸಿಫ್ ಕೂಡ ತನ್ನ ತಪ್ಪು ಒಪ್ಪಿಕೊಂಡಿದ್ದ ಎಂದು ತಿಳಿದು ಬಂದಿದೆ.