ಜಿಲ್ಲೆ

ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಪೊಲೀಸ್​ ವಶಕ್ಕೆ; ಬಂಧಿಸಲು ಹೋದ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ

rashmirhebbur

ಬೆಂಗಳೂರು: ಮೂರು ಕೊಲೆ, ಎರಡು ಕೊಲೆ ಯತ್ನ ಹಾಗೂ ದರೋಡೆ, ಕಳ್ಳತನ ಸೇರಿದಂತೆ ಒಟ್ಟು 15 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಳನಿ ಅಲಿಯಾಸ್​ ಕರ್ಚಿಪ್ ಪಳನಿ ಎಂಬ ಕುಖ್ಯಾತ ರೌಡಿಶೀಟರ್ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ರೌಡಿಶೀಟರ್​​ಗಳ ಮೇಲೆ ನಿಗಾ ಇಟ್ಟಿದ್ದರು. ಮಂಗಳವಾರ ಎಸಿಪಿ ಪರಮೇಶ್ವರ್​​ಗೆ ಅಶೋಕನಗರ ಬಳಿಯ ಸ್ಮಶಾನದಲ್ಲಿ ಪಳನಿ ಇರುವ ಬಗ್ಗೆ ಮಾಹಿತಿ ಬಂದಿತು. ಆತನನ್ನು ಬಂಧಿಸಲು ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ತೆರಳಿತು. ಆತ ಶರಣಾಗದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಎಸಿಪಿ ಪರಮೇಶ್ವರ್ ಶರಣಾಗುವಂತೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಪಳನಿ, ಸಿಸಿಬಿ ಪೊಲೀಸ್ ಇನ್​​ಸ್ಪೆಕ್ಟರ್ ಹರೀಶ್ ಕುಮಾರ್​​ ಮೇಲೆ ಡ್ಯಾಗರ್​​ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಆತನ ಕಾಲಿಗೆ ಎಸಿಪಿ ಪರಮೇಶ್ವರ್ ಒಂದು ಸುತ್ತು ಗುಂಡು ಹಾರಿಸಿ ಬಂಧಿಸಿದರು. ಸದ್ಯ ಗಾಯಾಳು ಇನ್​​ಸ್ಪೆಕ್ಟರ್ ಹರೀಶ್​ ಹಾಗೂ ಆರೋಪಿ ಪಳನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಇನ್​ಸ್ಪೆಕ್ಟರ್​ ಹರೀಶ್​​ಕುಮಾರ್​

ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಬಬ್ಲಿಯ ಸಹಚರನಾಗಿದ್ದ ಪಳನಿ, 2013 ರಲ್ಲಿ ಆನೆಪಾಳ್ಯದಲ್ಲಿ ಲೋಕಿ ಎಂಬಾತನನ್ನ ಕೊಲೆಗೈದಿದ್ದ. ಕುಮಾರಸ್ವಾಮಿ‌ ಲೇಔಟ್ ಹಾಗೂ ಅಶೋಕನಗರ ಠಾಣೆಯ ರೌಡಿಶೀಟರ್ ಆಗಿದ್ದ ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಳ್ಳಂದೂರಿನಲ್ಲಿ ಮುನ್ನಾಕುಮಾರ್ ಎಂಬಾತನನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.