ಜಿಲ್ಲೆ

ಕೊಲೆ ಆರೋಪಿ ರೌಡಿ ಶೀಟರ್ ಕಾಲಿಗೆ ಗುಂಡೇಟು

ಗಂಗಾಧರ ಬಿ ವಿ

ರಾಮನಗರ: ವಿಚಾರಣೆ ವೇಳೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮೇಲೆ ಹಲ್ಲೆ ಮಾಡಲು ಮುಂದಾದ ರೌಡಿ ಶೀಟರ್ ಓರ್ವನ  ಕಾಲಿಗೆ  ಕಗ್ಗಲೀಪುರ ಠಾಣೆ ಇನ್ಸ್ ಪೆಕ್ಟರ್ ಸುಂದರ್ ಗುಂಡು ಹಾರಿಸಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರಿನ ಜೆಪಿ ನಗರ ನಿವಾಸಿ ಸೋಮ (50) ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. 2023ರ ಡಿಸೆಂಬರ್ 5ರಂದು ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ  ಕಗ್ಗಲೀಪುರ ಕೆರೆಯ ಏರಿ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ರೌಡಿ ಶೀಟರ್ ಸೋಮೇಶ  ಅಲಿಯಾಸ್ ಸೋಮನನ್ನು ವಶಕ್ಕೆ ಪಡೆದು ಘಟನೆ ನಡೆದ ಸ್ಥಳಕ್ಕೆ ಸ್ಥಳ ಮಹಜರಿಗೆ ಶನಿವಾರ ಕರೆದುಕೊಂಡು ಹೋಗಿದ್ದರು.

ಈ ವೇಳೆ ಆನೇಕಲ್ ರಸ್ತೆಯ ಮುಳುಕ ಮಲೆ ಎನ್ನುವಲ್ಲಿ ಆರೋಪಿ ಸೋಮ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಮಡೆಯಪ್ಪ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲಿ ಯತ್ನಿಸಿದ್ದಾನೆ. ಈ ವೇಳೆ ಪ್ರಾಣ ರಕ್ಷಣೆ ಹಿನ್ನೆಲೆಯಲ್ಲಿ ಪಿಐ ಸುಂದರ್ ಅವರು ಆರೋಪಿ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

ತಕ್ಷಣ ಗಾಯಾಳು ಆರೋಪಿಯನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಬಂಧಿತ ಆರೋಪಿ ಸೋಮನ ವಿರುದ್ಧ ಒಟ್ಟು  ಜೆಪಿ. ನಗರ, ಮಡಿವಾಳ, ಮೈಕೋಲೇಔಟ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ ಸೇರಿದಂತೆ ವಿವಿಧ 15 ಪ್ರಕರಣಗಳು ದಾಖಲಾಗಿವೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.