ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ರೇಣುಕಾನಗರದಲ್ಲಿ ನೀರು ಕಾಯಿಸುವ ಹಂಡೆಯಲ್ಲಿ 45 ದಿನದ ಹಸುಳೆಯನ್ನು ಮುಳುಗಿಸಿ ಹೆತ್ತ ತಾಯಿಯೇ ಕೊಲೆ ಮಾಡಿರುವ ಹೃದಯವಿದ್ರಾವಕ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.
ವಿಶ್ವೇಶ್ವರಪುರದ ರೇಣುಕಾನಗರ ನಿವಾಸಿ ರಾಧಾ (32) ಎಂಬುವರನ್ನು ಪೊಲೀಸರು ಬಂಧಿಸಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿ ನಾಟಕ:
ಜು.07ರ ಬೆಳಗಿನ ಜಾವ 12:30 ವೇಳೆಯಲ್ಲಿ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಬಳಿಕ ಬೆಳಗಿನ ಜಾವ 4:30 ವೇಳೆಯಲ್ಲಿ ಮಗು ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ತಾಯಿ ರಾಧಾಳೆ ನಾಟಕ ಮಾಡಿದ್ದಾಳೆ. ಯಾರೂ ಇಬ್ಬರು ಆಪರಿಚಿತರು ಮನೆಗೆ ಬಂದು ಮಗುವನ್ನು ಅಪಹರಿಸಿದ್ದಾರೆ ಎಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾಳೆ ಎನ್ನಲಾಗಿದೆ. ಪತಿ ಪವನ್ ಹಾಗೂ ಸಮೀಪದಲ್ಲಿರುವ ಸಂಬಂಧಿಕರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ನೀರಿನ ಹಂಡೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಕೊಲೆ ಒಪ್ಪಿಕೊಂಡ ತಾಯಿ: ಪೊಲೀಸರ ತನಿಖೆ ವೇಳೆ ರಾಧಾ ಮಗುವನ್ನು ಹತ್ಯೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಪತಿ ಪವನ್ ಕುಡಿತ ಚಟಕ್ಕೆ ಬಿದ್ದು ಕುಟುಂಬ ನೋಡಿಕೊಳ್ಳುತ್ತಿರಲಿಲ್ಲ, ಮಗುವಿಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಪತಿ ಕುಟುಂಬದ ನಿರ್ವಹಣೆಗೆ ಗಮನ ನೀಡುತ್ತಿರಲಿಲ್ಲ ಬಡತನ ಹೆಚ್ಚಾಗಿತ್ತು ಇದರಿಂದ ಮಗುವಿನ ಪಾಲನೆ ಕಷ್ಟವಾದ ಹಿನ್ನೆಲೆಯಲ್ಲಿ ತಡರಾತ್ರಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನಲೆ: ಕಳೆದ ಒಂದೂವರೆ ವರ್ಷದ ಹಿಂದೆ ಒಂದೇ ಬಡಾವಣೆಯ ನಿವಾಸಿಯಾಗಿದ್ದ ಪವನ್‌ಕುಮಾರ್ ಹಾಗೂ ರಾಧಾ ನಡುವೆ ಸ್ನೇಹವಾಗಿ ಸ್ನೇಹ ಬಳಿಕ ಪ್ರೀತಿಯಾಗಿತ್ತು. ಬಳಿಕ ಮನೆಗೆ ತಿಳಿದಿದ್ದು ಇಬ್ಬರಿಗೂ ವಿವಾಹ ಮಾಡಿಕೊಟ್ಟಿದ್ದರು. ಪವನ್ ಹಾಗೂ ರಾಧಾ ದಂಪತಿಗೆ ಗಂಡು ಮಗು ಜನಿಸಿತ್ತು. ಜು.6ರಂದು ಸಂಜೆ ಪತಿ ಪವನ್ ಕೆಲಸ ಮಗಿಸಿಕೊಂಡು ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದು ಊಟ ಮಾಡಿ ಬಳಿಕ ಮನೆ ಮುಂಭಾಗದ ಸ್ನೇಹಿತರೊಬ್ಬರ ಆಟೋದಲ್ಲಿ ಮಲಗಿದ್ದ ಎನ್ನಲಾಗಿದೆ.