ಮಡಿಕೇರಿ:
ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್ ಆಲಿಯಾಸ್ ಶಂಬು (43) ಎಂಬವರ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ಹಾನಗಲ್ಲು ಗ್ರಾಮದ ಬಿ.ಎಂ. ಕಿರಣ್ (44), ಸೋಮವಾರಪೇಟೆ ಹಾನಗಲ್ಲು ಚೌಡ್ಲು ಗ್ರಾಮದ ಪಿ.ಎಂ. ಗಣಪತಿ (44) ಹಾಗೂ ಸೋಮವಾರಪೇಟೆ ಹಾನಗಲ್ಲು ಗ್ರಾಮದ ಬಿ.ಎಂ. ಕಿರಣ್ ಪತ್ನಿ ಸಂಗೀತ (35) ಬಂಧಿತ ಆರೋಪಿಗಳು ಎಂದು ಎಸ್‌ಪಿ ಕೆ. ರಾಮರಾಜನ್ ಭಾನುವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 9 ಸಂಜೆ 7 ಗಂಟೆಗೆ ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್ ಆಲಿಯಾಸ್ ಶಂಬು ಸ್ನೇಹಿತರಾದ ಜಾನ್ ಪೌಲ್ ಎಂಬವರ ಕಾರು ತೆಗೆದುಕೊಂಡು ಹೋಗಿದ್ದು, ದಿನಾಂಕ ಮೇ 10ರ ರಾತ್ರಿ ತನಕ ವಾಪಸ್ ಬಾರದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡಿಕೊಡುವಂತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಮೇ 10 ರಂದು ಸಕಲೇಶಪುರ ತಾ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಯಾವುದೋ ಅಪರಿಚಿತ ಕಾರು ನಿಂತಿದ್ದು, ಅದರ ಮುಂಭಾಗ ಮತ್ತು ಹಿಂಬದಿ ಹಾಗೂ ಬಳಭಾಗದಲ್ಲಿ ರಕ್ತದ ಕಲೆಗಳು ಹಾಗೂ ಚಿಕ್ಕ-ಚಿಕ್ಕ ಕೂದಲುಗಳು ದೊರಕಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಾಹನ ಮಾಲೀಕರ ಪತ್ತೆಗೆ ಪ್ರಯತ್ನಿಸಿದ ಸಂದರ್ಭ ಕುಶಾಲನಗರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದ ಕಾರು ಎನ್ನುವುದು ತಿಳಿದು ಬಂದಿತ್ತು.
ಸಂಪತ್ ಪತ್ತೆ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಮೇ 14ರಂದು ಸಕಲೇಶಪುರ ತಾಲೂಕಿನ ವಣಗೂರು ಅರಣ್ಯದಲ್ಲಿ ಸಂಪತ್ ಮೃತ ದೇಹ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಮೃತ ಸಂಪತ್ ಆಲಿಯಾಸ್ ಶಂಬು ಅವರನ್ನು ಆರೋಪಿಗಳು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದರು. ಆರೋಪಿ ಸಂಗೀತಾ ಸಂಪತ್‌ನನ್ನು ಸೋಮವಾರಪೇಟೆಯ ಹಾನಗಲ್ ಗ್ರಾಮಕ್ಕೆ ಮೇ 9ರಂದು ಬರಮಾಡಿಕೊಂಡು ಇತರೇ ಆರೋಪಿಗಳಾದ ಗಣಪತಿ ಹಾಗೂ ಕಿರಣ್ ಜತೆ ಸೇರಿಕೊಂಡು ಕೋವಿಯಿಂದ ಬೆದರಿಸಿ, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡಿ, ಮೃತದೇಹವನ್ನು ಸಂಪತ್ ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರ ತಾಲೂಕು ವಣಗೂರು ಅರಣ್ಯದಲ್ಲಿ ಬಿಸಾಡಿ ಕಾರನ್ನು ಕಲ್ಲಳ್ಳಿ ಗ್ರಾಮದಲ್ಲಿ ನಿಲ್ಲಿಸಿ ಮೊದಲೇ ಬೆಂಗಳೂರಿನಿAದ ಬರಮಾಡಿಕೊಂಡಿದ್ದ ಬೇರೊಂದು ಕಾರಿನಲ್ಲಿ ವಾಪಾಸ್ ಬಂದಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ಕಿರಣ್‌ನನ್ನು ಮೇ 16ರಂದು ಬೆಂಗಳೂರಿನಲ್ಲಿ, ಮತ್ತ್ತೊಬ್ಬ ಆರೋಪಿ ಗಣಪತಿಯನ್ನು ಮೇ 17ಕ್ಕೆ ಬೆಳ್ತಂಗಡಿಯಲ್ಲಿ ಹಾಗೂ ಕಿರಣ್ ಪತ್ನಿ ಸಂಗೀತಾಳನ್ನು ಮೇ 18ರಂದು ಸೋಮವಾರಪೇಟೆಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಹಾಗೂ ಆರೋಪಿಗಳಾದ ಕಿರಣ್ ಮತ್ತು ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರೆ ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಎಸ್.ಪಿ. ತಿಳಿಸಿದ್ದಾರೆ.