ಕುಶಾಲನಗರ:
ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಳ್ಳುವ ಮೂಲಕ ಸದಾ ಅಧ್ಯಯನಶೀಲರಾದಲ್ಲಿ ಹೆಚ್ಚಿನ ಜ್ಞಾನವಂತರಾಗಲು ಸಾಧ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜ್ಞಾನಕ್ಕೆ ಸರಿ ಸಮನಾದ ಗೌರವ ಸಮಾಜದಲ್ಲಿ ಮತ್ತೊಂದಿಲ್ಲ. ವಿದ್ಯಾರ್ಥಿಗಳಿಗೆ ಓದು ಉದ್ಯೋಗ ತಂದು ಕೊಟ್ಟರೆ, ಜ್ಞಾನ ಅವರನ್ನು ಅನ್ವೇಷಣೆಗೆ ಈಡು ಮಾಡುತ್ತದೆ. ವಿದ್ಯಾರ್ಥಿಗಳು ಅಬ್ದುಲ್ ಕಲಾಂ, ಅಂಬೇಡ್ಕರ್, ಬುದ್ಧ, ಬಸವಣ್ಣನಂಥ ಮೇರು ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನೈತಿಕತೆ, ಸಚ್ಛಾರಿತ್ರ‍್ಯ, ಉತ್ತಮ ಸಂಸ್ಕಾರ ಇರುವವರಲ್ಲಿ ದೇಶದ ಭವಿಷ್ಯ ಅಡಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ವಿದ್ಯಾರ್ಥಿಗಳು ಗುರಿಯನ್ನು ಮುಂದಿಟ್ಟು ಅದನ್ನು ತಲುಪಲು ನಿರಂತರ ಶ್ರಮ, ಸತತ ಅಧ್ಯಯನ ಹಾಗೂ ಏಕಾಗ್ರತೆ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಸಾಧಕರು ಮಾದರಿಯಾಗಬೇಕು. ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ. ಯಾವುದೇ ಒತ್ತಡ, ದುಗುಡ ಬೇಡ. ಪ್ರತಿ ದಿನದ ಓದನ್ನು ಮನನ ಮಾಡಿ. ಪೋಷಕರಿಗೆ ಹೊರೆಯಾಗದೇ ಅವರ ನಿರೀಕ್ಷೆಗಳನ್ನು ಈಡೇರಿಸಿ ಎಂದರಲ್ಲದೆ ಕಥೆ, ಕವನ ಬರೆಯುವ ಹವ್ಯಾಸ ರೂಢಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅಂಥ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಉತ್ತೇಜಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೂಡಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಸಾಧನೆಯ ದಾಪುಗಾಲಿಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರೋಗ್ಯವಂತಾಗಬೇಕು ಎಂದರು.
ಶಾಲಾ ಪ್ರಾಂಶುಪಾಲ ಕೆ. ಪ್ರಕಾಶ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್.ಎ. ಯೋಗೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಹೆಬ್ಬಾಲೆ ಗ್ರಾಪಂ ಅಧ್ಯಕ್ಷ ಅರುಣಕುಮಾರಿ, ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾಪ್ರಕಾಶ್, ಕೂಡುಮಂಗಳೂರು ಗ್ರಾಪಂ ಸದಸ್ಯೆ ಇಂದಿರಾ ರಮೇಶ್, ಶಾಲಾ ಪೋಷಕ ಸಮಿತಿಯ ಗಂಗಾಧರ್, ಮಂಜುನಾಥ್, ರುಬೀನಾ ಮೊದಲಾದವರಿದ್ದರು.