ನಿತ್ಯಾನಂದ ಒಳಕಾಡು ಸ್ಮರಣೆ
ಹೊಸಬದುಕು ಆಶ್ರಮದಲ್ಲಿ ಶ್ರದ್ಧಾಂಜಲಿ
ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಮುರಳೀಧರ್ ಬಲ್ಲಾಳ್ ಅವರು ನಿಸ್ವಾರ್ಥದ ಸಮಾಜ ಸೇವಕರಾಗಿದ್ದರು. ಅವರ ಅನನ್ಯವಾದ ಸಾಮಾಜಿಕ ಸೇವೆ ಮಾದರಿ, ಪ್ರೇರಣೆಯಾಗಿದೆ. ಅನಾಥಾಶ್ರಮಗಳಿಗೆ ಪಡಿತರ ಸಾಮಾಗ್ರಿ, ದೇಣಿಗೆ ನೀಡುವ ಮೂಲಕ ಅಸಹಾಯಕರಿಗೆ ಆಶಾಕಿರಣವಾಗಿದ್ದರು ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸ್ಮರಿಸಿದರು.
ಉಡುಪಿಯ ಕೋರ್ಟ್ ರಸ್ತೆ ಮಾರ್ಗದಲ್ಲಿರುವ ಹೊಸಬದುಕು ಆಶ್ರಮದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮುರಳೀಧರ್ ಬಲ್ಲಾಳ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಉಚಿತ ಸೇವೆಗೆ ಸಹಕಾರ
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಮಹಾಪೋಷಕರಾಗಿದ್ದ ಬಲ್ಲಾಳ್ ಅವರು, ನಾಗರಿಕ ಸಮಿತಿಯು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ವಿದ್ಯುತ್ ಚಾಲಿತ ಶೀತಲೀಕೃತ ಶವ ರಕ್ಷಣಾ ಯಂತ್ರ ನೀಡಿದ್ದರು. ಅಲ್ಲದೆ, ಸಮಿತಿಯ ಉಚಿತ ಸೇವೆಯ ಆಂಬುಲೆನ್ಸ್ ವಾಹನದ ಇಂಧನ ವೆಚ್ಚವನ್ನೂ ಭರಿಸುತ್ತಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮುಂದಾಳುವಾಗಿದ್ದ ಅವರ ಅಗಲಿಕೆ ತುಂಬ ದು:ಖ ತಂದಿದೆ ಎಂದರು.
ಹೊಸಬದುಕು ಆಶ್ರಮದ ಮೇಲ್ವಿಚಾರಕ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಉಪಸ್ಥಿತರಿದ್ದ ಆಶ್ರಮ ವಾಸಿಗಳು ಬಲ್ಲಾಳ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.