ಮಡಿಕೇರಿ:
ಸಿಹಿ-ಕಹಿಗಳ ಸಮ್ಮಿಶ್ರ ಅನುಭವದೊಂದಿಗೆ 2024ನ್ನು ಬೀಳ್ಕೋಟ್ಟು ಇದೀಗ 2025ರ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಕಳೆದ ವರ್ಷದ ಅನಾವೃಷ್ಟಿ, ಅತಿವೃಷ್ಟಿ, ಬೆಳೆನಾಶ, ವನ್ಯಜೀವಿ-ಮಾನವ ಸಂಘರ್ಷ, ಒಂದಿಷ್ಟು ವಿವಾದಗಳ ನೆನಪುಗಳ ಜತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳ ಮೆಲುಕು ಉಳಿದಿರುವಂತೆಯೇ ಮುಂದಿನ ವರ್ಷಕ್ಕೆ ಸಕಲವೂ ಒಳಿತಾಗಲಿ ಎನ್ನುವ ಹಾರೈಕೆಗಳೊಂದಿಗೆ ಜಿಲ್ಲೆಯ ಜನತೆಯಲ್ಲಿ ಒಂದಿಷ್ಟು ನಿರೀಕ್ಷೆಗಳೂ ಮನೆ ಮಾಡಿವೆ.
ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿಗೆ ರೈಲ್ವೆ ಮಾರ್ಗ ಇಲ್ಲದ ದೇಶ ಏಕೈಕ ಜಿಲ್ಲೆ ಎನ್ನುವ ಹಣೆಪಟ್ಟಿಯೂ ಇದೆ. ದೇಶಕ್ಕೆ ಸ್ವಾತಂತ್ರö್ಯ ಬಂದು 7 ದಶಕಗಳೇ ಕಳೆದರೂ ನಮ್ಮಲ್ಲಿಗೆ ರೈಲ್ವೆ ಸಂಪರ್ಕ ಬಂದಿಲ್ಲ ಎನ್ನುವ ಕೊರಗು ಸ್ಥಳೀಯರಲ್ಲಿ ಇದೆ. ಕೊಡಗಿಗೆ ಅತಿ ಹೆಚ್ಚು ಪ್ರವಾಸಿಗರು ಬರುವುದು ಮಾತ್ರವಲ್ಲದೆ ದೇಶದಲ್ಲೇ ಅತ್ಯಧಿಕ ಕಾಫಿ ಬೆಳೆಯುವ ಜಿಲ್ಲೆಯೂ ಆಗಿದೆ. ಕರಿಮೆಣಸು, ಏಲಕ್ಕಿ ಸೇರಿಂತೆ ಸಾಂಬಾರ ಬೆಳೆಗಳನ್ನೂ ಬೆಳೆಯಲಾಗುತ್ತದೆ. ದೊಡ್ಡ ಸಂಖ್ಯೆಯ ಸೈನಿಕರನ್ನೂ ಭಾರತೀಯ ಸೇನೆಗೆ ಕೊಟ್ಟಿರುವ ಹೆಗ್ಗಳಿಕೆಯೂ ಕೊಡಗಿಗೆ ಇದೆ. ಹಾಗಾಗಿ ಜಿಲ್ಲೆಗೆ ರೈಲ್ವೆ ಸಂಪರ್ಕ ಇದ್ದರೆ ಅನುಕೂಲ ಎನ್ನುವ ಬೇಡಿಕೆಗೆ ಒತ್ತಾಸೆಯಾಗಿ ಪ್ರಯತ್ನಗಳು ನಡೆಯುತ್ತಿದ್ದರೂ ರೈಲ್ವೇ ಮಾರ್ಗದ ಸರ್ವೇಗಷ್ಟೇ ಇದು ಸೀಮಿತವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲುದಾರಿಕೆಯಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಅನುದಾನದ ಕೊರತೆ ನೆಪ ಹೇಳಿ ರಾಜ್ಯ ಸರ್ಕಾರ ಯೋಜನೆಯನ್ನು ತಿರಸ್ಕರಿಸಿದೆ ಎನ್ನುವ ಮಾಹಿತಿಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೀಡಿದ್ದಾರೆ. ಎಲ್ಲ ಅಡೆತಡೆಗಳು ನಿವಾರಣೆಯಾಗಿ ಈ ವರ್ಷವಾದರೂ ಕೊಡಗಿಗೆ ರೈಲ್ವೆ ಸಂಪರ್ಕದ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆ ನೀರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ.
ಜಗತ್ತಿನೊಂದಿಗೆ ಶೀಘ್ರ ಸಂಪರ್ಕಕ್ಕೆ ಸಹಾಯವಾಗಬಲ್ಲ ವಾಯುಮಾರ್ಗದ ಅನುಕೂಲವೂ ಕೊಡಗಿನಿಂದ ದೂರ ಉಳಿದಿದೆ. ಖಾಸಗಿಯಾಗಿ ಬೆರಳೆಣಿಕೆಷ್ಟು ಹೆಲಿಪ್ಯಾಡ್‌ಗಳಿದ್ದರೂ ಗಣ್ಯರ ಆಗಮನ ಸಂದರ್ಭ ಹೆಲಿಕಾಪ್ಟರ್ ಏರಿಳಿಯಲು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ಬಳಸುವ ಅನಿವಾರ್ಯತೆ ಇದೆ. ಜಿಲ್ಲೆಗೆ ಒಂದು ಮಿನಿ ವಿಮಾನ ನಿಲ್ದಾಣ ಬೇಕು ಎನ್ನುವ ಕೂಗು ಸಾಕಷ್ಟು ಹಳೆಯದಾಗಿದ್ದು, ಈ ಸಂಬAಧ ಪ್ರಯತ್ನಗಳು ನಡೆದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹಿಂದಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೊಡಗು ಸೇರಿದಂತೆ ಮೂರು ಕಡೆಗಳಲ್ಲಿ ಏರ್‌ಸ್ಟಿçಪ್ ನಿರ್ಮಾಣದ ಘೋಷಣೆ ಮಾಡಿದ್ದು, ಸದ್ಯದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜಾಗ ಗುರುತಿಸಲಾಗಿದೆ. ಏರ್‌ಸ್ಟಿçಪ್‌ನಲ್ಲಿ ಒಂದು ರನ್‌ವೇ ಮತ್ತು ಏರ್‌ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಇರಲಿದ್ದು, 140 ಎಕರೆ ಜಾಗ ಬೇಕಾಗುತ್ತದೆ. ಹಾಗಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 161 ಎಕರೆ ಭೂಮಿ ಗುರುತಿಸಲಾಗಿದೆ. ಆದರೆ ಈ ಯೋಜನೆ ಸರ್ಕಾರಿ ಉಪಯೋಗಕ್ಕೆ ಮಾತ್ರ ಎನ್ನುವ ಮಾಹಿತಿ ಇದ್ದು, ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಏರ್‌ಸ್ಟಿçಪ್ ನಿರ್ಮಾಣ ಆಗಲಿ ಎನ್ನುವ ನಿರೀಕ್ಷೆಯನ್ನು ಕೊಡಗಿನವರು ಇಟ್ಟುಕೊಂಡಿದ್ದಾರೆ.
ಜಿಲ್ಲೆಯ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಗಳು ಮಾತ್ರವಲ್ಲದೆ, ಪಟ್ಟಣದೊಳಗಿನ ರಸ್ತೆಗಳು, ಗ್ರಾಮೀಣ ರಸ್ತೆಗಳು ಬಹುತೇಕ ಕಡೆಗಳಲ್ಲಿ ಸಂಪೂರ್ಣ ಹಾಳಾಗಿದೆ. ಕೆಲವು ಕಡೆಗಳಲ್ಲಂತೂ ವಾಹನಗಳು ಓಡಾಡಲು ಕೂಡ ಅಸಾಧ್ಯ ಎನ್ನುವ ಸ್ಥಿತಿ ಇದೆ. ಅಲ್ಲಲ್ಲಿ ಗುಂಡಿ ಮುಚ್ಚುವ ಕೆಲಸಗಳು ನಡೆದರೂ ಅವು ಪರಿಪೂರ್ಣ ಆಗಿಲ್ಲ. ಕೊಡಗು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಇಲ್ಲಿ ರಸ್ತೆ ನಿರ್ಮಾಣ ಸಂದರ್ಭ ಗುಣಮಟ್ಟ ಕಾಪಾಡಿಕೊಳ್ಳುವುದರ ಜತೆಗೆ ವೈಜ್ಞಾನಿಕವಾಗಿಯೂ ಯೋಜನೆ ಮಾಡಬೇಕಾಗುತ್ತದೆ. ಹೀಗಾದಾಗ ಮಾತ್ರ ರಸ್ತೆಗಳು ಬಾಳಿಕೆ ಬರುತ್ತದೆ ಎನ್ನುತ್ತಾರೆ ತಜ್ಞರು. ಜಿಲ್ಲೆಯ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದು ಮಾತ್ರವಲ್ಲದೆ ಸರ್ವಋತು ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಸರ್ಕಾರ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಇಲ್ಲಿಯ ರಸ್ತೆಗಳಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿ ಎನ್ನುವುದು ಸ್ಥಳೀಯರ ಹೊಸ ವರ್ಷದ ನಿರೀಕ್ಷೆಗಳಲ್ಲಿ ಒಂದು.
ಕೊಡಗಿನಲ್ಲಿ ವನ್ಯಜೀವಿ - ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಕಾಡಾನೆಗಳಂತೂ ಹಗಲಿನಲ್ಲೂ ಜನವಸತಿ ಪ್ರದೇಶಗಳಿಗೆ ನುಗ್ಗುವುದು ಸಾಮಾನ್ಯ ಎಂಬAತಾಗಿದೆ. ಇದರಿಂದಾಗಿ ಪ್ರಾಣ ಹಾನಿ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಕೃಷಿ ಫಸಲು ನಷ್ಟದ ವರದಿ ಆಗುತ್ತಲೇ ಇರುತ್ತದೆ. ದಕ್ಷಿಣ ಕೊಡಗು ಭಾಗದಲ್ಲಿ ಹುಲಿ ಹಾವಳಿಯೂ ತೀವ್ರವಾಗಿದೆ. ಇದರ ಜತೆಗೆ ಕಾಡುಕೋಣ, ಕಾಡೆಮ್ಮೆ, ಕೋತಿ, ನವಿಲು, ಕರಡಿ, ಚಿರತೆ ಸೇರಿದಂತೆ ಇತರ ವನ್ಯಜೀವಿಗಳ ಕಾಟವೂ ಮನುಷ್ಯರ ತಾಳ್ಮೆ ಪರೀಕ್ಷೆ ಮಾಡುವಂತಿದೆ. ಇವುಗಳಿಂದ ಆಗುವ ನಷ್ಟಗಳಿಗೆ ಸರ್ಕಾರ ಒಂದಿಷ್ಟು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದು ಹೊರತುಪಡಿಸಿದರೆ ಬೇರೇನು ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ. ಕಾಡಾನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಶಾಸಕರು ಈಗಾಗಲೇ ಅರಣ್ಯ ಸಚಿವರ ಜತೆ ಚರ್ಚೆ ನಡೆಸಿ ಯೋಜನೆಯೊಂದರ ನೀಲನಕಾಶೆ ರೂಪಿಸಿದ್ದಾರೆ. ಈ ಯೋಜನೆ ಈ ವರ್ಷವೇ ಅನುಷ್ಠಾನಕ್ಕೆ ಬರಲಿ ಎನ್ನುವ ಒತ್ತಾಸೆ ಸ್ಥಳೀಯರದ್ದು.
ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎನ್ನುವ ನಿರೀಕ್ಷೆಯೂ ಸ್ಥಳೀಯರಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕ್ರೀಡಾ ವಿವಿ ಸ್ಥಾಪನೆಯ ಪ್ರಸ್ತಾಪ ಆಯಿತಾದರೂ ಸ್ಥಳ ನಿಗದಿಯಾಗದೇ ನೆನೆಗುದಿಗೆ ಬಿದ್ದಂತಿದೆ. ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೂ ಕೊಡಗಿಗೆ ಕ್ರೀಡಾ ವಿವಿ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಕಾಲೇಜಿಗೆ ಸಂಬAಧಿಸಿದAತೆ ಬೋಧಕ ಆಸ್ಪತ್ರೆ ಇದೆ. ಈಗ ಸುಸಜ್ಜಿತ ಕಟ್ಟಡವೂ ನಿರ್ಮಾಣ ಆಗಿದೆ. ಆದರೆ ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆ ಬೇಕೆಂದರೆ ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳುವುದು ಅನಿವಾರ್ಯ. ಇದರಿಂದಾಗಿ ಸಮಯ ವ್ಯರ್ಥವಾಗುವುದಲ್ಲದೆ ಗೋಲ್ಡನ್ ಹವರ್‌ನಲ್ಲಿ ಸಿಗಬೇಕಾದ ಚಿಕಿತ್ಸೆ ಸಿಗದೆ ಸಾವು ಕೂಡ ಸಂಭವಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹಾಗಾಗಿ ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆಗೆ ಈ ವರ್ಷವಾದರೂ ಕಾಲ ಕೂಡಿಬರಲಿ ಎನ್ನುತ್ತಾರೆ ಸ್ಥಳೀಯರು.
ಕೊಡವರ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ, ಪದ್ಧತಿ-ಪರಂಪರೆ ಸಂರಕ್ಷಣೆಗೋಸ್ಕರ ನಿರ್ಮಿಸಲಾಗುತಿರುವ ಕೊಡವ ಹೆರಿಟೇಜ್ ಸೆಂಟರ್ ಇನ್ನೂ ನಿರ್ಮಾಣ ಹಂತದಲ್ಲೇ ಇದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗಳಿಗೋಸ್ಕರ ನಿರ್ಮಾಣ ಮಾಡಲಾಗುತ್ತಿರುವ ಕನ್ನಡ ಸಮುಚ್ಛಯ ಭವನ ಕಾಮಗಾರಿ ಕುಂಟುತ್ತಿದೆ. ಈ ವರ್ಷವಾದರೂ ಇವುಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿ ಎನ್ನುವ ನಿರೀಕ್ಷೆ ಇದೆ.
ಕಾಫಿ ಬೆಳೆ ಕೊಡಗಿನ ಆರ್ಥಿಕತೆಯ ಪ್ರಮುಖ ಮೂಲವಾದರೂ ಜಿಲ್ಲೆ ಈಗ ಪ್ರವಾಸೋದ್ಯಮವನ್ನೇ ಉಸಿರಾಡುತ್ತಿದೆ. ಪ್ರಾಕÊತಿಕ ವಿಕೋಪ ಸೇರಿದಂತೆ ಹಲವು ಕಾರಣಗಳಿಂದ ಏರಿಳಿತದ ದಾರಿಯಲ್ಲಿದ್ದ ಇಲ್ಲಿಯ ಪ್ರವಾಸೋದ್ಯಮ ಈಗ ಒಂದು ಹಂತಕ್ಕೆ ತಲುಪಿದೆ. ಆದರೂ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳ ಅಗತ್ಯವಿದೆ. ಪ್ರವಾಸಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ತೆರೆ ಮರೆಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದು, ಪ್ರಕೃತಿಗೆ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುವುದು. ಅನಿಯಂತ್ರಿತ ಹೋಮ್‌ಸ್ಟೇಗಳಿಗೆ ಕಡಿವಾಣ ಹಾಕುವುದು ಮತ್ತಿತರ ಕೆಲಸಗಳು ಈ ಹೊಸ ವರ್ಷದಲ್ಲಿ ಆಗಬೇಕಿದೆ.
ತಾಲೂಕು ವ್ಯಾಪ್ತಿಯಲ್ಲಿ ನಿರೀಕ್ಷೆಗಳು:
ಮಡಿಕೇರಿ:
ನಗರಸಭೆಗೆ ನೂತನ ಆಡಳಿತ ಮಂಡಳಿ
ಹಾಳಾದ ರಸ್ತೆಗಳ ದುರಸ್ತಿ
ಬೀದಿ ನಾಯಿಗಳ ಹಾವಳಿಗೆ ಮುಕ್ತಿ
ಕಸದ ಸಮಸ್ಯೆಗೆ ಶಾಶ್ವತ ಪರಿಹಾರ
ಪಟ್ಟಣ ಪಂಚಾಯಿತಿಯಾಗಿ ನಾಪೋಕ್ಲು ಮೇಲ್ದರ್ಜೆಗೆ
ಸೋಮವಾರಪೇಟೆ:
ಪಾಳುಬಿದ್ದಿರುವ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣ
ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರು
ಕೊಡ್ಲಿಪೇಟೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ
ಸೋಮವಾರಪೇಟೆ ಪಟ್ಟಣಕ್ಕೆ ಮೂಲ ಸೌಕರ್ಯ
ಕುಶಾಲನಗರ:
ಕೊಡಗು ವಿಶ್ವವಿದ್ಯಾಲಯಕ್ಕೆ ಅವಶ್ಯಕ ಅನುದಾನ
ಕೂಡಿಗೆ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆ
ಕುಶಾಲನಗರ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ
ಕೈಗಾರಿಕಾ ಬಡಾವಣೆ ತನಕ ರೈಲು ಸಂಪರ್ಕ
ಸುಂಟಿಕೊಪ್ಪದಲ್ಲಿ ಬಸ್ ನಿಲ್ದಾಣ
ಪೊನ್ನಂಪೇಟೆ:
ತಾಲೂಕು ಆಡಳಿತ ಸೌಧ ನಿರ್ಮಾಣ
ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ
ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ
ಪುರಸಭೆಯಾಗಿ ಗೋಣಿಕೊಪ್ಪ ಮೇಲ್ದರ್ಜೆಗೆ
ವಿರಾಜಪೇಟೆ:
ಸಿದ್ದಾಪುರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ
2018ರ ಪ್ರವಾಹದಲ್ಲಿ ಮನೆ ಕಳೆದು ಕೊಂಡವರಿಗೆ ಶಾಶ್ವತ ಪರಿಹಾರ
ದುಬಾರೆ ಹಾಡಿಯ ಜನರಿಗೆ ನೆಮ್ಮದಿಯ ಜೀವನ
ವಿರಾಜಪೇಟೆ ಪುರಸಭೆ ಸುಸಜ್ಜಿತ ಭವನ ನಿರ್ಮಾಣ