ಜಿಲ್ಲೆ

ಮುನಿರತ್ನ ವಿರುದ್ಧ ಎಚ್.ಎ.ವೆಂಕಟೇಶ್ ಕಿಡಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಲಂಚ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಮುನಿರತ್ನ ಅವರನ್ನು ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಚಾಟಿಸಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಬಿಜೆಪಿ ಮಾಡಲಿದೆಯೇ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಪ್ರಶ್ನಿಸಿದ್ದಾರೆ.


ನಾವೆಲ್ಲ ಹಿಂದು, ನಾವೆಲ್ಲ ಒಂದು ಎನ್ನುವ ಬಿಜೆಪಿಯ ನಾಯಕರು ಢೋಂಗಿಗಳು ಎನ್ನುವುದು ಮತ್ತೆ ಸಾಬೀತಾಗಿದೆ. ಇವರು ಯಾರಿಗೂ ಮರ್ಯಾದೆ ಕೊಡುವುದಿಲ್ಲ. ಇವರಲ್ಲಿ ವ್ಯಕ್ತಿಗೌರವ ಮತ್ತು ಸಮಾನತೆ ಎನ್ನುವುದು ಇಲ್ಲ. ಮಹಿಳೆಯರಿಗಂತೂ ಇವರು ಕಿಂಚಿತ್ತೂ ಗೌರವ ನೀಡುವುದಿಲ್ಲ. ಇವರು ಅಧಿಕಾರದಲ್ಲಿರುವುದೇ ಮತ್ತೊಬ್ಬರನ್ನು ಶೋಷಿಸಲು ಮತ್ತು ಕಮಿಷ ್ಹೊಡೆಯಲು ಎನ್ನುವುದನ್ನು ಈ ಪಕ್ಷದ ಮುನಿರತ್ನ ನಾಯ್ಡು ಮತ್ತೆ ಸಾಬೀತು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.


ದಲಿತರು ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿ, ಅಸಹ್ಯ ರೀತಿಯಲ್ಲಿ ಮಹಿಳೆಯರನ್ನು ಬಿಂಬಿಸಿರುವ ಈ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿರಲು ಅನರ್ಹ. ಸಂಸ್ಕಾರ ಸಂಸ್ಕೃತಿ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಶಾಸಕನ ಅಯೋಗ್ಯತನದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಜಾತೀಯತೆಯ ಗ್ಯಾಂಗ್ರಿನ್‌ನಿಂದ ಪೀಡಿತವಾಗಿರುವ ಮುನಿರತ್ನ ಮಿದುಳನ್ನು ಬಿಜೆಪಿಯ ನಾಯಕರು ಶುಚಿಗೊಳಿಸುವರೇ ಎಂದು ಪ್ರಶ್ನಿಸಿದ್ದಾರೆ.


ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಪ್ರಾಥಮಿಕ ಜ್ಞಾನವಿಲ್ಲದ ಮುನಿರತ್ನ ಕುಟುಂಬದ ಕೆಲವರು ಹಿಂದಿನಿಂದಲೂ ಸಮಾಜಘಾತುಕ ನಡವಳಿಕೆ ಹೊಂದಿದ್ದರು ಎನ್ನುವುದು ಸಮಾಜಕ್ಕೆ ಗೊತ್ತಿದೆ. ತಾನು ಇದಕ್ಕೆ ಹೊರತಲ್ಲ ಎನ್ನುವುದನ್ನು ಈಗ ಸಾಬೀತು ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸರ್ಕಾರದ ಎಲ್ಲ ಸವಲತ್ತುಗಳನ್ನು ವಾಪಸು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.