ಜಿಲ್ಲೆ

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕ್ಲಿನಿಕ್ ತ್ಯಾಜ್ಯ

ಹೊನ್ನಾಳಿ: ತಾಲೂಕಿನ ಮಾಸಡಿ ಗ್ರಾಮ ಸಮೀಪದ ಘನತ್ಯಾಜ್ಯ ಘಟಕಕ್ಕೆ ಕಸ ವಿಲೇವಾರಿ ಮಾಡುವ ಸಂಬಂಧ ಪುರಸಭೆ ಅಧಿಕಾರಿಗಳು ಹಾಗೂ ಮಾಸಡಿ ಗ್ರಾಮಸ್ಥರ ನಡುವೆ ಉಂಟಾಗಿದ್ದ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೊದಲೇ ಖಾಸಗಿ ಕ್ಲಿನಿಕ್​ಗಳಲ್ಲಿ ಬಳಸಿದ್ದ ಪರಿಕರಗಳನ್ನು ಹಾಕಿರುವುದಕ್ಕೆ ಪುರಸಭೆ ಅಧಿಕಾರಿಗಳು ಗರಂ ಆಗಿದ್ದಾರೆ.

ಗ್ರಾಮಸ್ಥರು ಕಸ ತುಂಬಿದ ಪುರಸಭೆಯ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ, ಪರಿಸರಕ್ಕೆ ಹಾನಿಯಾಗದಂತೆ ಕಸ ವಿಲೇವಾರಿ ಮಾಡಬೇಕು ಹಾಗೂ ಘನತ್ಯಾಜ್ಯ ಘಟಕದಲ್ಲಿ ಪರಿಸರಕ್ಕೆ ಹಾನಿಯಾಗುವ ಯಾವುದೇ ಕಸವನ್ನು ಹಾಕದಂತೆ ಆಗ್ರಹಿಸಿದ್ದರು. ಈ ಕುರಿತು ಪುರಸಭೆ ಹಾಗೂ ಗ್ರಾಮಸ್ಥರ ನಡುವೆ ರಾಜಿ ಸಂಧಾನವಾಗಿ, ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಸ ವಿಲೇವಾರಿ ಮಾಡಲಾಗುವುದು. ಸತ್ತ ಅಥವಾ ಕೊಳೆತ ಪ್ರಾಣಿಗಳನ್ನು ಹಾಕದಂತೆ ಕ್ರಮ ವಹಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು.

ಈ ನಡುವೆ ಕ್ಲಿನಿಕ್​ನವರು ಸಿರಿಂಜ್ ಸೇರಿ ಇತರ ಪರಿಕರಗಳನ್ನು ಘನತ್ಯಾಜ್ಯ ಘಟಕದಲ್ಲಿ ಸುಟ್ಟಿರುವುದು ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕೆಲ ಕ್ಲಿನಿಕ್​ಗಳ ಹೆಸರು ಪತ್ತೆಯಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ಹೊನ್ನಾಳಿ ಪಟ್ಟಣದ ರಸ್ತೆ ಪಕ್ಕದಲ್ಲಿ ಕ್ಲಿನಿಕ್​ನವರು ಸಿರಿಂಜ್, ಕಾಟನ್, ಔಷಧ ಸೇರಿ ಅನಾರೋಗ್ಯಕ್ಕೆ ಕಾರಣವಾಗುವ ಪರಿಕರಗಳನ್ನು ಎಸೆಯುತ್ತಿದ್ದರು. ಇಂತಹ ಅಪಾಯಕಾರಿ ತ್ಯಾಜ್ಯಗಳನ್ನು ಮತ್ತೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದಾಗ ರಸ್ತೆ ಬದಿ ಹಾಕುವುದನ್ನು ಬಿಟ್ಟಿದ್ದರು ಎಂದರು.

ಆದರೆ ಈಗ ಘನತ್ಯಾಜ್ಯ ಘಟಕದಲ್ಲಿ ಹಾಕುತ್ತಿರುವುದು ಕಂಡು ಬಂದಿದೆ. ಅಲ್ಲದೆ ಈ ವಸ್ತುಗಳನ್ನು ಯಾರು ತಂದು ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪುರಸಭಾಧ್ಯಕ್ಷ ಮೈಲಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ನಿರೀಕ್ಷಕ ಪರಮೇಶ್ ನಾಯ್್ಕ ಕಿರಿಯ ನಿರೀಕ್ಷಕ ಸಿದ್ದೇಶ್ ಗೌಡ ಹಾಗೂ ಪೌರ ಕಾರ್ವಿುಕರು ಇದ್ದರು.