ವಿಜಯವಾಣಿ ಸುದ್ದಿಜಾಲ ಆನೇಕಲ್
ಪಟ್ಟಣ ಸಮೀಪದ ತಿಮ್ಮರಾಯಸ್ವಾಮಿ ದೇವಾಲಯ ಪ್ರವೇಶದ್ವಾರದ ಬಳಿ ಪಾಳು ಬಿದ್ದ ಜಾಗದಲ್ಲಿ ಪುರಸಭೆ ಡಿಜಿಟಲ್ ವಾಲ್ ಪ್ರಿಟಿಂಗ್ ಮತ್ತು ಕಿರು ಉದ್ಯಾನ ನಿರ್ಮಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದ್ದು, ಅಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಶ್ಲಾಸಿದ್ದಾರೆ.
ಪುರಸಭೆ ವ್ಯಾಪ್ತಿಯ ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಹಲವು ವರ್ಷಗಳಿಂದ ಪೇ ಆ್ಯಂಡ್ ಯೂಸ್ ಶೌಚಗೃಹ ನಿರ್ಮಿಸಲಾಗಿತ್ತು. ಆದರೆ ಈ ಕಟ್ಟಡ ಉದ್ಘಾಟನೆಯಾಗುವ ಮುನ್ನವೇ ಪಾಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಟ್ಟಡದ ಸುತ್ತಲೂ ಗಿಡ-ಗಂಟಿ ಬೆಳೆದಿದ್ದವು. ಈ ರಸ್ತೆಯಲ್ಲಿ ತೆರಳುತ್ತಿದ್ದ ಕೆಲವರು ಖಾಲಿ ಜಾಗವನ್ನೇ ಶೌಚಗೃಹವಾಗಿ ಮಾಡಿಕೊಂಡಿದ್ದರು. ಇದರಿಂದಾಗಿ ಇಡೀ ವಾತಾವರಣ ಗಬ್ಬು ನಾರುತ್ತಿತ್ತು. ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಅವ್ಯವಸ್ಥೆ ಸರಿಪಡಿಸಲು ಕಾರ್ಯಯೋಜನೆ ಸಿದ್ಧಪಡಿಸಿದ ಆನೇಕಲ್ ಪುರಸಭೆ, ಗೋಡೆಗಳಿಗೆ ಡಿಜಿಟಲ್ ವಾಲ್ ಪ್ರಿಂಟಿಂಗ್ ಮಾಡಿಸಿ ಪಟ್ಟಣದ ವಿವಿಧ ದೇವಾಲಯಗಳು, ಚರ್ಚ್, ಮಸೀದಿ, ದಸರಾ, ಕರಗ, ಮುತ್ಯಾಲಮಡು ಹೀಗೆ ವಿವಿಧ ಪ್ರಮುಖ ಚಿತ್ರಗಳನ್ನೊಳಗೊಂಡ ಗೋಡೆ ಬರಹವನ್ನು ಮಾಡಿಸಿದೆ.
ಗಬ್ಬು ನಾರುತ್ತಿದ್ದ ಜಾಗದಲ್ಲಿ ಕಿರು ಉದ್ಯಾನ ನಿರ್ಮಿಸಿ ಆಕರ್ಷಣೀಯಗೊಳಿಸಲಾಗಿದೆ. ಈ ರಸ್ತೆಯಲ್ಲಿ ತೆರಳುವವರು ಒಮ್ಮೆ ನಿಂತು ನೋಡುವ, ಸೆಲ್ಫಿ ತೆಗೆದುಕೊಳ್ಳುವ ತಾಣವಾಗಿ ಮಾರ್ಪಾಡಾಗಿದೆ.