ಮೈಸೂರು: ಕಾಂಗ್ರೆಸ್ ವಾಮಮಾರ್ಗದ ಮೂಲಕ ನಂಜನಗೂಡು ನಗರಸಭೆ ಅಧಿಕಾರ ಹಿಡಿದಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ದೂರಿದರು.
ನಂಜನಗೂಡು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಕೈ ತಪ್ಪಿದೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರನ್ನು ಕನಕಪುರದ ರೆಸಾರ್ಟ್‌ವೊಂದರಲ್ಲಿ ಇಟ್ಟಿದ್ದರು ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮುಂದುವರಿಸಲು ನಿರ್ಧರಿಸಲಾಗಿತ್ತು. ಅದರಂತೆ ಜೆಡಿಎಸ್‌ನ ರೆಹಾನಬಾನು ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಒಪ್ಪಿದ್ದೆವು. ಆದರೂ ಜೆಡಿಎಸ್‌ನ ಮೂವರು ಸದಸ್ಯರು ಕಡೇ ಕ್ಷಣದಲ್ಲಿ ಕಾಂಗ್ರೆಸ್ ಜತೆಗೆ ಕೈ ಜೋಡಿಸಿದರು. ಅಲ್ಲದೆ ಬಿಜೆಪಿಯ ನಾಲ್ವರು ಸದಸ್ಯರು, ಯಾರ ಸಂಪರ್ಕಕ್ಕೂ ಸಿಗದೆ ಮತದಾನಕ್ಕೆ ಗೈರಾದರು ಎಂದು ಹೇಳಿದರು.
ಜೆಡಿಎಸ್ ಸದಸ್ಯರ ನಿಲುವು ಆಘಾತ ಉಂಟು ಮಾಡಿದೆ. ಇವರೆಲ್ಲರೂ ಯಾವ ಆಮಿಷಕ್ಕೆ ಬಲಿಯಾಗಿದ್ದಾರೋ ಗೊತ್ತಿಲ್ಲ. ಬಹುಶಃ ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರ ಹಿಡಿಯಬೇಕೆಂಬ ಹಠದಲ್ಲಿ ಕಾಂಗ್ರೆಸ್ ವಾಮಮಾರ್ಗ ಅನುಸರಿಸಿರುವುದು ಖಂಡನೀಯ. ಕಾಂಗ್ರೆಸ್ ಅಕ್ರಮವಾಗಿ ಸಂಗ್ರಹಿಸಿರುವ ಹಣದ ಬಳಕೆ ಮಾಡಿ ಅಧಿಕಾರ ಹಿಡಿದಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ, ಸ್ಥಳೀಯ ಸಂಸದರು, ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.
ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದರೂ ನಮ್ಮ ಪಕ್ಷದಲ್ಲೇ ನಮ್ಮನ್ನು ತುಳಿಯುವ ಕೆಲಸ ನಡೆಯುತ್ತಿದೆ. ಇದು ನಿಜಕ್ಕೂ ಬೇಸರ ತರಿಸಿದೆ. ಮುಂದೆ ಸಂಘಟಿತವಾಗಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಹೇಳಿದರು.
ವಿಪ್ ಉಲ್ಲಂಘಿಸಿದವರ ಉಚ್ಚಾಟನೆ:
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ನಗರಸಭೆ ಚುನಾವಣೆ ಸಂಬಂಧ ಬಿಜೆಪಿಯ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೂ ಪಕ್ಷದ ವಿಪ್ ಉಲ್ಲಂಘಿಸಿ ನಾಲ್ವರು ಬಿಜೆಪಿ ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದಾರೆ ಎಂದರು.
ವಿಪ್ ಉಲ್ಲಂಘಿಸಿರುವ ಬಿಜೆಪಿ ನಗರಸಭೆ ಸದಸ್ಯರಾದ ಗಿರೀಶ್‌ಕುಮಾರ್, ಗಾಯತ್ರಿ, ವಿಜಯಲಕ್ಷ್ಮಿ, ಮೀನಾಕ್ಷಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ 6 ವರ್ಷ ಉಚ್ಚಾಟಿಸಿದ್ದು, ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ಮುಖಂಡರಾದ ಚಿಕ್ಕರಂಗನಾಯಕ, ಎಸ್. ಮಹದೇವಯ್ಯ ಇದ್ದರು.