ಕಾರವಾರ: ನೇತಾಜಿ ಸುಭಾಷ್‌ಚಂದ್ರ ಭೋಸ್ ಜಯಂತಿಯನ್ನು ನಗರಸಭೆ ಆಚರಿಸದ ಬಗ್ಗೆ ಸದಸ್ಯರಿಂದ ಅಸಮಾಧಾನ ವ್ಯಕ್ತವಾಗಿದೆ.
ನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ತಿರಗುವುವಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ವೃತ್ತವಿದೆ. ಅಲ್ಲಿ ನೇತಾಜಿ ಅವರ ಪ್ರತಿಮೆಯೂ ಇದೆ. ನಗರಸಭೆ ವೃತ್ತವನ್ನು ನಿರ್ವಹಿಸುತ್ತಿದೆ.
ಜ.23 ರಂದು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 127 ನೇ ಜಯಂತಿಯಾಗಿತ್ತು. ಕಳೆದ 35 ವರ್ಷಗಳಿಂದಲೂ ನಗರಸಭೆಯೇ ಅಲ್ಲಿ ಜಯಂತಿಯನ್ನು ಆಚರಿಸುತ್ತಿತ್ತು. ಜನಪ್ರತಿನಿಽಗಳು, ಸಾರ್ವಜನಿಕರು ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ನಗರಸಭೆಯೀಂದ ಯಾವುದೇ ಜಯಂತಿ ಆಚರಣೆ ನಡೆದಿಲ್ಲ. ಪೌರಾಯುಕ್ತರನ್ನು ಕೇಳಿದರೆ ನಮಗೆ ಅಂಥ ಯಾವುದೇ ಸೂಚನೆ ಇಲ್ಲ ಎಂಬ ಉತ್ತರ ಬಂದಿತ್ತು ಎನ್ನಲಾಗಿದೆ.
ಬೆಳಗ್ಗೆ ವಿಷಯ ತಿಳಿದಿ ಎಂಎಲ್‌ಸಿ ಗಣಪತಿ ಉಳ್ವೆಕರ್, ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ನಿತಿನ್ ಪಿಕಳೆ, ಸ್ಥಾಯಿ ಸಮಿತಿ ಚೇರ್ಮನ್ ಮನೋಜ ಬಾಂದೇಕರ್, ಸದಸ್ಯರಾದ ಪ್ರೇಮಾನಂದ ಗುನಗಾ, ಉಲ್ಲಾಸ ಕೇಣಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ಗಣಪತಿ ಮಾಂಗ್ರೆ ಇತರರು ತೆರಳಿ ಹಾರ ಹಾಕಿ ಪ್ರತಿಮೆಗೆ ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಹಲವು ವರ್ಷಗಳಿಂದ ಭೋಸ್ ಜಯಂತಿ ಆಚರಿಸುತ್ತ ಬಂದಿತ್ತು. ಆದರೆ, ಈ ವರ್ಷ ಆಚರಿಸದೇ ಪ್ರಮಾದ ಎಸಗಿದೆ ಎಂದರು. ಡಾ.ನಿತಿನ್ ಪಿಕಳೆ ಮಾತನಾಡಿ, ಕಳೆದ ಕೆಲ ತಿಂಗಳಿಂದ ನಗರಸಭೆಯಲ್ಲಿ ಅಧ್ಯಕ್ಷ , ಉಪಾಧ್ಯಕ್ಷರಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಈಗ ಜಯಂತಿ ಆಚರಿಸದೇ ರಾಷ್ಟ್ರದ ಮಹಾನ್ ಪುರುಷನಿಗೆ ಅಧಿಕಾರಿಗಳು ಅಗೌರವ ತೋರಿದ್ದಾರೆ ಎಂದರು.