ಉಡುಪಿ: ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಉಂಟಾಗುವ ಸಾಧಕ&ಬಾಧಕಗಳ ಬಗ್ಗೆ ಸೇರ್ಪಡೆಗೊಳ್ಳಲಿರುವ ಗ್ರಾಪಂಗಳಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. 9 ಗ್ರಾಪಂಗಳ ಪೈಕಿ ಕೆಮ್ಮಣ್ಣು ಹೊರತುಪಡಿಸಿ ಉಳಿದ 8 ಗ್ರಾಪಂಗಳು ಒಪ್ಪಿಗೆ ನೀಡಿವೆ ಎಂದು ಪೌರಾಯುಕ್ತ ಡಾ. ಉದಯ್ ಶೆಟ್ಟಿ ತಿಳಿಸಿದರು.
ಮಂಗಳವಾರ ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಮಾಹಿತಿ ನೀಡಿದ ಅವರು, ಅಲೆವೂರು, ಉದ್ಯಾವರ, ಕಡೆಕಾರ್, ಅಂಬಲಪಾಡಿ, ತೆಂಕನಿಡಿಯೂರು, ಬಡನಿಡಿಯೂರು, ಕಲ್ಯಾಣಪುರ, 80 ಬಡಗಬೆಟ್ಟು ಗ್ರಾಮ ಪಂಚಾಯಿತಿಗಳು ಸಮ್ಮತಿ ಸೂಚಿಸಿವೆ. ಕೆಮ್ಮಣ್ಣು ಗ್ರಾಪಂ ತೆರಿಗೆ ಹೆಚ್ಚಳವಾಗುತ್ತದೆ ಎಂಬ ಉದ್ದೇಶದಿಂದ ಸೇರ್ಪಡೆಗೆ ಒಪ್ಪಿಲ್ಲ. ಇದನ್ನು ಹೊರತುಪಡಿಸಿದರೂ ಪ್ರಸ್ತಾವಿತ ಮಹಾನಗರಪಾಲಿಕಾ ವ್ಯಾಪ್ತಿಯಲ್ಲಿ ಸುಮಾರು 3.80 ಲಕ್ಷ ಜನವಾಸವಿದ್ದಾರೆ ಎಂದು ತಿಳಿಸಿದರು. ನಂತರ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿಸಲು ಅವಿರೋಧವಾಗಿ ರ್ನಿಣಯಕೈಗೊಳ್ಳಲಾಯಿತು.
ಪ್ರಮಾಣಪತ್ರ ದರ ಏರಿಕೆ
ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ ಮಾತನಾಡಿ, ನಗರಸಭೆಯಿಂದ ನೀಡುವ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಈ ಹಿಂದೆ 10 ರೂ. ಪಡೆಯಲಾಗುತ್ತಿದ್ದು, ಪ್ರಸ್ತುತ 50 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಪೌರಾಡಳಿತ ಸಚಿವಾಲಯದ ಸುತ್ತೋಲೆ ಆದೇಶದಂತೆ ದರ ಏರಿಕೆ ಮಾಡಲಾಗಿದೆ ಎಂದರು. ಶಾಸಕ ಯಶ್ಪಾಲ್ ಮಾತನಾಡಿ, ಯಾವುದೇ ಸುತ್ತೋಲೆಗಳು ಬಂದಾಗ ಸದಸ್ಯರ ಗಮನಕ್ಕೆ ತರಬೇಕು ಎಂದರು.
ಸುಮಿತ್ರಾ ನಾಯಕ್ ಮಾತನಾಡಿ, ಮಣಿಪಾಲ ಮತ್ತು ಮಲ್ಪೆ ಭಾಗದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ವಾರ್ಡ್ಗಳಲ್ಲಿ ಶೌಚಾಲಯ ಪಿಟ್ ಶುಚಿಗೊಳಿಸುವ ಸೆಸ್ಪೋಲ್ ವಾಹನಕ್ಕೆ 2 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದ್ದು, ಜನರಿಗೆ ಹೊರೆಯಾಗಿದೆ. ಇದನ್ನು 1 ಸಾವಿರ ರೂ.ಗೆ ಇಳಿಕೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಮಣಿಪಾಲ ಭಾಗದಲ್ಲಿ ರಾತ್ರಿ ಹೊತ್ತು ಕೊಳಚೆ ನೀರನ್ನು ನೇರವಾಗಿ ಒಳಚರಂಡಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಸೂಕ್ತಕ್ರಮಕೈಗೊಳ್ಳಬೇಕು. ವಸತಿಗೃಹಗಳಿಗೆ ಸೆಸ್ಪೋಲ್ ವಾಹನ ಶುಲ್ಕವನ್ನು ಶೇ.50ರಷ್ಟು ಕಡಿತಗೊಳಿಸಬೇಕು ಎಂದು ಸೂಚಿಸಿದರು.
ನಗರಕ್ಕೆ ಪ್ರತಿದಿನ 25 ಎಂಎಲ್ಡಿ ವಾರಾಹಿ ನೀರು
ಸದಸ್ಯೆ ಅಮೃತಾಕೃಷ್ಣಮೂರ್ತಿ, ನಾಯರ್ಕೆರೆ-ಕಿನ್ನಿಮೂಲ್ಕಿ ರಸ್ತೆಯಲ್ಲಿ ಅಗ್ನಿಶಾಮಕ ಠಾಣೆ ಬಳಿ ಹಂಪ್ಸ್ ಅಳವಡಿಸುವ ಮೂಲಕ ಅಪಘಾತ ತಡೆಯಬೇಕೆಂದು ಆಗ್ರಹಿಸಿದರು. ವಾರಾಹಿ ನೀರು ನಗರಕ್ಕೆ ಪೂರೈಕೆಯಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಾರಾಹಿ ಯೋಜನೆ ಇಂಜಿನಿಯರ್ ಅರಕೇಶ್, ವಾರಾಹಿಯಿಂದ ಪ್ರತಿದಿನ 25 ಎಂಎಲ್ಡಿ ನೀರು ಮಣಿಪಾಲ ಒಎಸ್ಟಿಪಿಗೆ ಪೂರೈಸಲಾಗುತ್ತಿದೆ. ಸ್ವರ್ಣಾ ನದಿಯಿಂದ 28 ಎಂಎಲ್ಡಿ ನೀರು ಪಂಪ್ ಮಾಡಲಾಗುತ್ತಿದೆ. 7 ಓವರ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದ್ದು, ಈಗಾಗಲೇ 6 ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿದೆ. ತಿಂಗಳಾಂತ್ಯಕ್ಕೆ 4 ಟ್ಯಾಂಕ್ಗಳಿಗೆ ನೀರು ಪೂರೈಸಲಾಗುವುದು. ಇದರಿಂದ ಎತ್ತರಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಮಾ.15ರೊಳಗೆ ವಾರಾಹಿ ಯೋಜನೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದರು.
ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ 58 ಕಟ್ಟಡಗಳಿಗೆ ನೋಟೀಸ್ ನೀಡಲಾಗಿದೆ. ಈ ಬಗ್ಗೆ ವಿವರ ನೀಡುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಎಲ್ಲಾ ಕಟ್ಟಡಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.
ದಿವ್ಯಾಂಗರಿಗೆ ಶೇ.5 ಅನುದಾನ ಮೀಸಲಿಗೆ ಆಗ್ರಹ
ಸದಸ್ಯ ವಿಜಯಕುಮಾರ್ ಕೊಡವೂರು ಮಾತನಾಡಿ, ನಗರಸಭೆಯ ಶೇ.5ರಷ್ಟು ಅನುದಾನದಲ್ಲಿ ದಿವ್ಯಾಂಗರಿಗೆ ಭತ್ಯೆ, ಸಹಾಯಕರಿಗೆ ಪೋಷಣಾ ಭತ್ಯೆ ನೀಡಬೇಕು. ಈ ಹಿಂದೆ ದಿವ್ಯಾಂಗರಿಗೆ ಅಡುಗೆ ಅನಿಲ, 500 ರೂ. ಭತ್ಯೆ ನೀಡಿರುವ ಉಲ್ಲೇಖವಿದೆ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮುಂದಿನ ಬಜೆಟ್ನಲ್ಲಿ ದಿವ್ಯಾಂಗರಿಗೆ ಅನುದಾನ ಒದಗಿಸಲಾಗುವುದು ಎಂದರು. ಉಪಾಧ್ಯೆ ರಜನಿ ಹೆಬ್ಬಾರ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ ಉಪಸ್ಥಿತರಿದ್ದರು.