ಕೊಳ್ಳೇಗಾಲ ಪಟ್ಟಣದ ಪೌರಕಾರ್ಮಿಕರ ಕಾಲನಿಯಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಂಗಳವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್ ಪರಿಶೀಲಿಸಿದರು. ಸುರೇಶ್, ರಾಘವೇಂದ್ರ, ಸ್ವಾಮಿ ನಂಜಪ್ಪ, ರಮೇಶ್ ಇತರರು ಇದ್ದರು. 
ಜಿಲ್ಲೆ

ನಗರಸಭೆ ಅಧ್ಯಕ್ಷರಿಂದ ಕಾಮಗಾರಿ ಪರಿಶೀಲನೆ

ನಾಗೇಶ ಎಸ್

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ 15ನೇ ವಾರ್ಡ್ ಪೌರ ಕಾರ್ಮಿಕರ ಕಾಲನಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಂಗಳವಾರ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಪೌರ ಕಾರ್ಮಿಕರ ಕಾಲನಿಯಲ್ಲಿ ಸುಮಾರು 98 ಮೀಟರ್ ಉದ್ದ ಹಾಗೂ 5 ಮೀಟರ್ ಅಗಲದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಪೌರ ಕಾರ್ಮಿಕರ ಕಾಲನಿಗೆ ಮೂಲ ಸೌಕಯ ಒದಗಿಸಬೇಕೆಂಬ ಉದ್ದೇಶದಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ವಿಶೇಷ ಅನುದಾನದಲ್ಲಿ 10 ಲಕ್ಷ ರೂ. ನೀಡಿದ್ದರು. ಹಿಂದೆಯೂ ಈ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣವಾಗಿದೆ. ಅಲ್ಲದೆ ರಸ್ತೆಯ ಮತ್ತೊಂದು ಬದಿಯಲ್ಲಿ ಚರಂಡಿ ಹಾಗೂ ಡಕ್ ನಿರ್ಮಾಣಕ್ಕೆ ನಗರೋತ್ಥಾನ ಯೋಜನೆಯಡಿ 8 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಸುರೇಶ್, ಸದಸ್ಯ ರಾಘವೇಂದ್ರ, ನಗರಸಭೆ ನಾಮನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಸ್ತೀಪುರ ರವಿ ಮತ್ತಿತರಿದ್ದರು.