ಬಸವಕಲ್ಯಾಣ: ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಸಮಸ್ಯೆ ಒಡ್ಡುತ್ತಿರುವ ಹಂದಿಗಳ ಸ್ಥಳಾಂತರಕ್ಕೆ ಮುಂದಾಗಿರುವ ನಗರಸಭೆ ಗುರುವಾರ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನೂರಕ್ಕೂ ಹೆಚ್ಚು ಹಂದಿಗಳನ್ನು ಬೇರೆಡೆ ಸುರಕ್ಷಿತವಾಗಿ ಸಾಗಿಸಿತು.
ವಾರದ ಹಿಂದೆ ಪ್ರಮುಖ ರಸ್ತೆ ಬದಿಯ ಒತ್ತುವರಿ ತೆರವಿಗೆ ಚಾಲನೆ ನೀಡಿದ ನಗರಸಭೆ ಇದೀಗ ಸಾರ್ವಜನಿಕ ಸಂಚಾರಕ್ಕೆ ಆಗಾಗ್ಗೆ ತೊಡಕಾಗುತ್ತಿರುವ ಹಂದಿಗಳ ಸ್ಥಳಾಂತರಕ್ಕೆ ಮುಂದಾಗಿದೆ. ಶ್ರೀ ಬಸವೇಶ್ವರ ದೇವಸ್ಥಾನ ಪರಿಸರ, ಕೋಟೆ ಪ್ರದೇಶ, ಬನಶಂಕರಿ ಗಲ್ಲಿ, ಹೊಸಪೇಟ್ ಗಲ್ಲಿ, ದೇಶಮುಖ ಗಲ್ಲಿ ಹಾಗೂ ಗಾಂಧಿ ವೃತ್ತ ಸುತ್ತಲಿನ ಪ್ರದೇಶದಲ್ಲಿ ಪೌರಾಯುಕ್ತ ರಾಜು ಡಿ.ಬಣಕಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ತುಮಕೂರಿನಿಂದ ಬಂದಿರುವ ಪರಿಣತರು ಹಂದಿಗಳನ್ನು ಹಿಡಿದು ವಾಹನಗಳಲ್ಲಿ ಕೊಂಡೊಯ್ದರು.
ನಗರಸಭೆ ಎಇಇಗಳಾದ ಶಿವಶರಣಪ್ಪ ಸಜ್ಜನಶೆಟ್ಟಿ, ಮನೋಜಕುಮಾರ ಕಾಂಬಳೆ, ಜೆಇ ಖಲೀಲ್, ನೈರ್ಮಲ್ಯ ನಿರೀಕ್ಷಕರಾದ ನಿತ್ಯಾನಂದ ಜಮಾದಾರ, ಗಂಗಾಧರ ಮೂಲಗೆ, ಶ್ವೇತಾ ಹೂಗಾರ ಇತರರು ಕಾರ್ಯಾಚರಣೆ ನಡೆಸಿದರು. ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬರೀಶ್ ವಾಗ್ಮೋಡೆ ಸ್ಥಳದಲ್ಲಿದ್ದು ಸಾಥ್ ನೀಡಿದರು.
ನಗರದ ಗಲ್ಲಿ, ಬಡಾವಣೆಗಳಲ್ಲಿ ಹೆಚ್ಚಾಗಿ ಕಾಣುವ ಹಂದಿಗಳು ಮುಖ್ಯ ರಸ್ತೆಗೂ ಅಡ್ಡಾಡುತ್ತವೆ. ರಾತ್ರಿಯಂತೂ ಅಂಗಡಿ ಹೋಟೆಲ್‌ಗಳಲ್ಲಿನ ತ್ಯಾಜ್ಯವನ್ನು ರಸ್ತೆ ಬದಿಗೆ ಹಾಕುವುದರಿಂದ ಉಪಟಳ ಹೆಚ್ಚಿರುತ್ತದೆ. ಕೆಲವೊಮ್ಮೆ ಬೈಕ್ ಸವಾರರು ಬಿದ್ದಿದ್ದೂ ಇದೆ.
ನಗರಸಭೆ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಹಂದಿ ಮಾಲೀಕರು ಸ್ವಲ್ಪ ದಿನ ಸಮಯ ನೀಡಿ. ನಾವೇ ಹಿಡಿದು ಬೇರೆಡೆ ಸಾಗಿಸುತ್ತೇವೆ ಎಂದು ಕೇಳಿಕೊಂಡಿದ್ದರಿಂದ ಐದು ದಿನ ಸಮಯಾವಕಾಶ ನೀಡಿ ಮಧ್ಯಾಹ್ನ ಕಾರ್ಯಾಚರಣೆ ನಿಲ್ಲಿಸಲಾಗಿದೆ.
ಬಸವಕಲ್ಯಾಣದಲ್ಲಿ ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಂದಿಗಳ ಉಪಟಳಕ್ಕೆ ಕಡಿವಾಣ ಹಾಕಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳ ಓಡಾಟ ನಿಯಂತ್ರಿಸುವಂತೆ ಮಾಲೀಕರಿಗೆ ಮೂರು ನೋಟಿಸ್ ನೀಡಿ ಅನೌನ್ಸ್ ಸಹ ಮಾಡಲಾಗಿತ್ತು. ಆದರೂ ಸ್ಪಂದಿಸದ್ದರಿಂದ ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
| ರಾಜು ಡಿ.ಬಣಕಾರ ಪೌರಾಯುಕ್ತ, ಬಸವಕಲ್ಯಾಣ