ಜಿಲ್ಲೆ

ಹೊಸ ಲೇಔಟ್​ಗಳಿಗೆ ಸಿಸಿ ನೀಡಲು ಪಾಲಿಕೆ-ಹುಡಾದಿಂದ ಜಂಟಿ ಸಮಿತಿ

ಹುಬ್ಬಳ್ಳಿ : ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದಿಂದ ಹು-ಧಾ ಸ್ಮಾರ್ಟ್​ಸಿಟಿ ಕಚೇರಿಯಲ್ಲಿ ಸೋಮವಾರ ನಡೆದ ಜಂಟಿ ಸಭೆಯಲ್ಲಿ ಹೊಸ ಬಡಾವಣೆಗಳ ಹಸ್ತಾಂತರ ಹಾಗೂ ಇನ್ನಿತರ ವಿಷಯಗಳ ಕುರಿತು ಚಚಿರ್ಸಲಾಯಿತು.

ಹೊಸ ಬಡಾವಣೆಗಳಿಗೆ (ಲೇಔಟ್​) ಮುಕ್ತಾಯ ಪ್ರಮಾಣ ಪತ್ರ (ಸಿಸಿ) ಪಡೆಯಲು ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಪಾಲಿಕೆ ಹಾಗೂ ಹುಡಾ ಅಧಿಕಾರಿಗಳ ಜಂಟಿ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಜಂಟಿ ಸಮಿತಿ ಹೊಸ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ರಸ್ತೆ, ಒಳಚರಂಡಿ ವ್ಯವಸ್ಥೆ, ಗಟಾರು, ಬೀದಿ ದೀಪ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಲಿದೆ. ಸಮಿತಿ ವರದಿ ಕೊಟ್ಟ ಒಂದು ದಿನದಲ್ಲಿ ಹೊಸ ಬಡಾವಣೆಗಳಿಗೆ ಹುಡಾದಿಂದ ಸಿಸಿ ಸಿಗಲಿದೆ. ಹುಡು ಸಿಸಿ ಒಂದು ತಿಂಗಳೊಳಗೆ ಪಾಲಿಕೆಯಿಂದಲೂ ಸಿಸಿ ದೊರಕಲಿದೆ. ಇದರಿಂದ ಡೆವಲಪರ್ಸ್​ಗಳಿಗೆ ಹೆಚ್ಚಿನ ಅನುಕೂಲ ದೊರಕಲಿದೆ.

ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಗಳಲ್ಲಿನ ಎಲ್ಲ ನಿವೇಶನಗಳನ್ನು ಇನ್ನು ಮುಂದೆ ಮಾರಾಟ ಮಾಡದೇ ಇರಲು ಅವಕಾಶ ನೀಡದಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಹೊಸ ಬಡಾವಣೆಗಳಿಗೆ ಅನುಮತಿ ಅಜಿರ್ (ಅಪ್ರುವಲ್​) ಹಾಕಿದ ನಂತರ ಹುಡಾ ಅಧಿಕಾರಿಗಳು ನೀಲನಕಾಶೆಯಲ್ಲಿ ಸೂಚಿಸುವ ಶೇ. 40ರಷ್ಟು ನಿವೇಶನಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲು ನಿರ್ಧರಿಸಲಾಯಿತು.

ದೊಡ್ಡ ಮಟ್ಟದ ಅಪಾರ್ಟ್​ಮೆಂಟ್​ಗಳಲ್ಲಿನ ಎಲ್ಲ ಮನೆಗಳಿಗೆ ಪಾಕಿರ್ಂಗ್​ ವ್ಯವಸ್ಥೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಆ ಮನೆಗಳಲ್ಲಿನ ಮಾಲೀಕರು ತಮ್ಮ ವಾಹನಗಳನ್ನು ರಸ್ತೆ ಮೇಲೆ ಪಾಕಿರ್ಂಗ್​ ಮಾಡಲು ಅವಕಾಶ ನೀಡಬಾರದೆಂಬ ನಿರ್ಧಾರ ಸಭೆಯಲ್ಲಿ ಮೂಡಿಬಂದಿತು.

ಮೇಯರ್​ ರಾಮಪ್ಪ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪಾಲಿಕೆ ಸಭಾ ನಾಯಕರ ವೀರಣ್ಣ ಸವಡಿ, ಸದಸ್ಯ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ವಿಜಯಕುಮಾರ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ಹಾಗೂ ಇತರರು ಇದ್ದರು.