ಗಂಗಾವತಿ 5ನೇ ವಾರ್ಡ್‌ನ ದಿನದ ತರಕಾರಿ ಮಾರುಕಟ್ಟೆಯಲ್ಲಿ ನಗರಸಭೆ ಆಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ರಸ್ತೆ ಬದಿ ಮಾರಾಟ ಕೈಬಿಡುವಂತೆ ವ್ಯಾಪಾರಿಗಳಿಗೆ ಸೂಚಿಸಿತು. ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಸದಸ್ಯ ಎಂ.ಡಿ.ಉಸ್ಮಾನ್, ಪ್ರಭಾರ ಎಇಇ ಶಂಕರಗೌಡ, ಪರಿಸರ ಇಂಜಿನಿಯರ್ ಚೇತನನಾಯ್ಕ, ಎಇಗಳಾದ ಶಿವಕುಮಾರ ಇತರರಿದ್ದರು.  
ಜಿಲ್ಲೆ

ಮಳಿಗೆಗಳ ಬಾಡಿಗೆ ವಸೂಲಿಗೆ ಕ್ರಮ

ಗಂಗಾವತಿ: ನಗರದ ಕಿಲ್ಲಾ ಏರಿಯಾದ ಮಾಂಸ ಮಾರಾಟ ಮಳಿಗೆಗಳನ್ನು ಮರು ನಿರ್ಮಿಸಲಾಗುತ್ತಿದ್ದು, ಬಾಡಿಗೆ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

ನಗರದ 5 ಮತ್ತು 6ನೇ ವಾರ್ಡ್‌ಗೆ ಸಿಟಿ ರೌಂಡ್‌ಅಪ್ ಅಭಿಯಾನದಡಿ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ನಗರಸಭೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆಯನ್ನು ಹಲವು ವರ್ಷಗಳಿಂದ ಕಟ್ಟದಿರುವ ಬಗ್ಗೆ ಮಾಹಿತಿಯಿದ್ದು, ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ವಚ್ಛತೆಯತ್ತ ಗಮನಹರಿಸದ ಅಂಗಡಿಕಾರರಿಗೂ ದಂಡ ಹಾಕಲಾಗುವುದು. ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದು, ಬೀದಿ ನಾಯಿಗಳ ಕಿರಿಕಿರಿ ಜಾಸ್ತಿಯಾಗಿದೆ. ಕೋಳಿ, ತರಕಾರಿ ತ್ಯಾಜ್ಯವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುವಂತಿಲ್ಲ. ಚರಂಡಿಯಲ್ಲಿ ಯಾವುದೇ ತ್ಯಾಜ್ಯ ಹಾಕುವಂತಿಲ್ಲ. ನೈರ್ಮಲ್ಯ ನಿರೀಕ್ಷಕರು ಹಲವು ಬಾರಿ ಸ್ವಚ್ಛತೆಗೆ ಸೂಚನೆ ನೀಡಿದರೂ ಅಂಗಡಿಕಾರರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲದಿನಗಳ ಗಡವು ನೀಡಲಾಗುತ್ತಿದ್ದು, ಪುನರಾವರ್ತನೆಯಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಹೈಟೆಕ್ ವಿನ್ಯಾಸ: ಮಾಂಸ ಮತ್ತು ತರಕಾರಿ ಮಾರುಕಟ್ಟೆ ಪ್ರಾಂಗಣನ್ನು ಮರು ನಿರ್ಮಿಸಲು ತಾಂತ್ರಿಕ ತಂಡಕ್ಕೆ ಸೂಚಿಸಿದ್ದು, ಹೈಟೆಕ್ ವಿನ್ಯಾಸದಲ್ಲಿ ರೂಪಿಸಲಾಗುವುದು. ವಾಹನ ಪಾರ್ಕಿಂಗ್, ನೀರು ಮತ್ತು ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ದಿನದ ಮಾರುಕಟ್ಟೆಯಲ್ಲಿ ತರಕಾರಿ ಪ್ರಾಂಗಣವನ್ನು ವಿಭಿನ್ನ ರೀತಿಯಲ್ಲಿ ನಿರ್ಮಿಸುವ ಯೋಚನೆಯಿದೆ. ವಾರ್ಡ್‌ಗಳಲ್ಲಿ ಸಿಡಿ ಹಾಳಾಗಿದ್ದರಿಂದ ಚರಂಡಿ ನೀರು ಸರಾಗ ಹರಿಯುತ್ತಿಲ್ಲ. ಕೆಲ ನೀರು ಘಟಕಗಳು ಹಾಳಾಗಿದ್ದು, ದುರಸ್ತಿಗೆ ಸೂಚಿಸಲಾಗಿದೆ ಎಂದರು.

ಕಿಲ್ಲಾ ಏರಿಯಾ ಒಳಭಾಗದ ಕಾಲನಿಗಳಲ್ಲಿ ರಸ್ತೆ ಬಹುತೇಕ ಒತ್ತುವರಿಯಾಗಿದ್ದು, ಜನರ ಸಂಚಾರಕ್ಕೆ ತೊಂದರೆಯಾಗಿದೆ. ಸ್ವಯಂ ಪ್ರೇರಿತ ತೆರವಿಗೆ ವಾರದ ಗಡವು ನೀಡಲಾಗುತ್ತಿದ್ದು, ನಿರ್ಲಕ್ಷಿಸಿದರೆ ನಗರಸಭೆಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

ಎರಡು ವಾರ್ಡ್‌ಗಳ ಕಾಲನಿಗಳಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ, ಸಮಸ್ಯೆಗಳ ಬಗ್ಗೆ ಜನರಿಂದ ಅಹವಾಲು ಆಲಿಸಿತು. ನೈರ್ಮಲೀಕರಣ, ಕುಡಿವ ನೀರು ಮತ್ತು ಬೀದಿ ದೀಪಗಳ ಸಮರ್ಪಕ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಸ್ತೆ ಬದಿಯಲ್ಲಿರುವ ತಳ್ಳು ಬಂಡಿಗಳ ತೆರವಿಗೆ ಸೂಚಿಸಿದರು.

ನಗರಸಭೆ ಸದಸ್ಯರಾದ ಎಂ.ಡಿ.ಉಸ್ಮಾನ್, ಅಬ್ದುಲ್ ಜಬ್ಬಾರ್, ಪ್ರಭಾರ ಎಇಇ ಶಂಕರಗೌಡ, ಪರಿಸರ ಇಂಜಿನಿಯರ್ ಚೇತನನಾಯ್ಕ, ಎಇಗಳಾದ ಶಿವಕುಮಾರ, ಪ್ರವೀಣಕುಮಾರ, ದಾಸನಾಳ ಗುರುರಾಜ್, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ನೈರ್ಮಲ್ಯ ನಿರೀಕ್ಷಕಿ ಶೋಭಾ ಅಂಗಡಿ ಇತರರಿದ್ದರು.

ಆಸ್ತಿ ಮುಟ್ಟಗೋಲು ಎಚ್ಚರಿಕೆ

ಖಾಲಿ ನಿವೇಶನ ಮತ್ತು ಹಾಳಬಿದ್ದ ಮನೆಗಳಲ್ಲಿ ಕಸ ಸಂಗ್ರಹವಾಗುತ್ತಿದ್ದು, ವಿಷ ಜಂತುಗಳು ಸೇರಿಕೊಳ್ಳುತ್ತಿವೆ. ಸಂಬಂಧಪಟ್ಟ ಮಾಲೀಕರು ನಿರ್ವಹಣೆಗೆ ಮುಂದಾಗಬೇಕಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿರ್ಲಕ್ಷಿಸಿದರೆ ನೋಟಿಸ್ ನೀಡಿ, ಎಚ್ಚರಿಕೆ ನೀಡಲಾಗುವುದು. ಸ್ಪಂದಿಸದಿದ್ದರೆ ಆಸ್ತಿ ಖಾತಾ ನಕಲು ರದ್ದುಪಡಿಸಿ, ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

ಮಾಂಸ ಮಾರಾಟ ಮಳಿಗೆಗಳಲ್ಲಿ ಸ್ವಚ್ಛತೆ ಮಾಯವಾಗಿದ್ದು, ದುರ್ನಾತದಿಂದ ತಂಡ ಹೊರಬರಬೇಕಾದ ಸ್ಥಿತಿ ಬಂತು. ಇನ್ನೂ ಕೆಲ ಮಳಿಗೆಗಳ ಬಾಡಿಗೆಯನ್ನು ವಕೀಲರೊಬ್ಬರ ಮೂಲಕ ಕೋರ್ಟ್‌ಗೆ ಕಟ್ಟುತ್ತಿರುವ ಬಗ್ಗೆ ಅಚ್ಚರಿಯ ಸಂಗತಿ ಮಾಲೀಕರಿಂದ ಕೇಳಿಬಂದಿದ್ದು, ವಾಸ್ತವ ಮಾಹಿತಿ ನಗರಸಭೆ ಸಿಬ್ಬಂದಿಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ಮತ್ತು ನೈರ್ಮಲ್ಯ ಅಧಿಕಾರಿಗಳಿಗೆ ಸೂಚಿಸಿದರು.