ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯ ಸ್ಥಾಯಿ ಸಮಿತಿ ರಚನೆಯ ಪ್ರಕ್ರಿಯೆಯಲ್ಲಿ ಲೋಪಗಳ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಮಗ್ರ ವರದಿಯನ್ನು ನೀಡಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪೌರಾಯುಕ್ತರಿಗೆ ಸೂಚಿಸಿದ್ದಾರೆ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಪ್ರಕ್ರಿಯೆ ಅಜೆಂಡಾ ಹಾಗೂ ಠರಾವು ಪ್ರತಿ, ಅಧ್ಯಕ್ಷರ ಆಯ್ಕೆಯ ದೃಢೀಕೃತ ಸೇರಿದಂತೆ ಹಲವು ದಾಖಲೆಗಳಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದರೂ ಕಾಲಹರಣ ಮಾಡಲಾಗುತ್ತಿದೆ ಎಂದು ಸದಸ್ಯ ಆರ್.ಮಟಮಪ್ಪ ಆರೋಪಿಸಿದ್ದು ಇದರ ಬಗ್ಗೆ ದೂರು ಸ್ವೀಕರಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ಕಚೇರಿಯು ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯ ಸಮಗ್ರ ವರದಿಯನ್ನು ನೀಡಲು ಪೌರಾಯುಕ್ತರಿಗೆ ಸೂಚಿಸಿದೆ.
*ಸದಸ್ಯರ ಆರೋಪಗಳು
ಇಲ್ಲಿನ ನಗರಸಭೆಯಲ್ಲಿ ರಾಜಕೀಯ ಪ್ರಭಾವಕ್ಕೊಳಕ್ಕಾಗಿ ಕಾನೂನು ನಿಯಮಗಳನ್ನು ಬದಿಗೊತ್ತಲಾಗುತ್ತಿದೆ. ಸರ್ಕಾರದ ಆದೇಶವಿದ್ದರೂ ಜನರಿಗೆ ಖಾತೆಗಳನ್ನು ವಿತರಿಸುತ್ತಿಲ್ಲ. ಹಲವು ಬಾರಿ ಕಚೇರಿಗೆ ಅಲೆದಾಡಿಸಲಾಗುತ್ತಿದೆ. ಇದರ ಪಾಡು ಹೇಳ ತೀರದಾಗಿದೆ. ಆಡಳಿತ ವ್ಯವಸ್ಥೆಯಲ್ಲೂ ನಾನಾ ಲೋಪಗಳಿವೆ. ಆ.೧ ಹಾಗೂ ಆ.೨೫ ರಂದು ಸ್ಥಾಯಿ ಸಮಿತಿಯ ದಿನಾಂಕ ಜು.೨೨ ರಂದು ನಡೆದ ಅಜೆಂಡಾ ಹಾಗೂ ಠರಾವು ಪ್ರತಿ, ಆ.೧೩ ರಂದು ಸ್ಥಾಯಿ ಸಮಿತಿ ರಚನೆ ಅಧ್ಯಕ್ಷರ ಆಯ್ಕೆ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೆ, ಇದನ್ನು ನೀಡದೇ ಬೇವಾಬ್ದಾರಿಯಿಂದ ವರ್ತಿಸಿರುವ ಪೌರಾಯುಕ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಆರ್.ಮಟಮಪ್ಪ ದೂರಿನಲ್ಲಿ ಮನವಿ ಮಾಡಿದ್ದಾರೆ.
*ಪ್ರಕ್ರಿಯೆ ಮುಗಿದರೂ ವಿವಾದ
ಇಲ್ಲಿನ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಬ್ರಮಣ್ಯಾಚಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಈಗಾಗಲೇ ಅಧಿಕಾರವನ್ನೂ ಸ್ವೀಕರಿಸಿದ್ದಾರೆ. ಇದೆಲ್ಲ ಪ್ರಕ್ರಿಯೆ ನಡೆದರೂ ವಿವಾದ ಮಾತ್ರ ಮುಗಿದಿಲ್ಲ. ದೃಢೀಕೃತ ದಾಖಲೆಗಳೊಂದಿಗೆ ಕಾನೂನು ಹೋರಾಟ ನಡೆಸುವ ನಿಟ್ಟಿನಲ್ಲಿ ಆರ್.ಮಟಮಪ್ಪ ಮುಂದಾಗಿದ್ದಾರೆ.