ಜಿಲ್ಲೆ

ಅಭಿವೃದ್ಧಿ ಕಾಮಗಾರಿಗಳಿಗೆ ಪಾಲಿಕೆ ಅನುಮೋದನೆ

ಪ್ರಸಿನ್ ಕೆ.ಆರ್

ಹಾಸನ: ಹಾಸನ ಮಹಾನಗರದ ಸರ್ವತೋಮುಖ ಅಭಿವೃದ್ಧಿಗೆ ಒಮ್ಮತದ ತೀರ್ಮಾನ ಕೈಗೊಂಡು ಹಲವು ಕಾಮಗಾರಿಗಳಿಗೆ ಮಹಾನಗರ ಪಾಲಿಕೆ ಅನುಮೋದನೆ ನೀಡಿದೆ ಎಂದು ಮೇಯರ್ ಗಿರೀಶ್ ಚನ್ನವೀರಪ್ಪ ಹೇಳಿದರು.

ನಗರದ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆ ವಿಶೇಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಅಭಿವೃದ್ಧಿ ಯೋಜನೆಗೆ ಎಲ್ಲ ಸದಸ್ಯರು ಪಕ್ಷಪಾತವಿಲ್ಲದೆ ಸರ್ವಾನುಮತದಿಂದ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಫೆಬ್ರವರಿ 7 ಮತ್ತು 18ರಂದು ಮಾಜಿ ಮೇಯರ್ ಚಂದ್ರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾದ ಸುಮಾರು 6 ಕೋಟಿ ರೂ. ವೆಚ್ಚದ 37 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಸೆಪ್ಟೆಂಬರ್ 25ರಂದು ನಡೆದ ಸಾಮಾನ್ಯ ಸಭೆಯಲ್ಲಿ 17 ಕೋಟಿ ರೂ. ವೆಚ್ಚದ 82 ಕಾಮಗಾರಿಗಳಿಗೂ ಸರ್ವಾನುಮತದಿಂದ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಅದೇ ರೀತಿ 24 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಎರಡು ಟೆಂಡರ್ ಪ್ರಕ್ರಿಯೆಗಳಿಗೂ ಸದಸ್ಯರ ಸಮ್ಮತಿ ದೊರೆತಿದ್ದು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಸಹ ಒಪ್ಪಿಗೆ ನೀಡಿದ್ದಾರೆ ಎಂದರು.

ಸ್ಥಳೀಯ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರಾಜ್ಯ ಸರ್ಕಾರವು 25 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ 6.25 ಕೋಟಿ ರೂ. ಮೊತ್ತವನ್ನು ನಗರದ ಅಭಿವೃದ್ಧಿಗೆ ಮೀಸಲಿಡಲು ಪಾಲಿಕೆ ಅನುಮೋದನೆ ನೀಡಿದೆ. ಈ ಮೊತ್ತವನ್ನು ಅಗತ್ಯಾನುಸಾರ ಪ್ರತಿ ವಾರ್ಡ್‌ನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಮೇಯರ್ ವಿವರಿಸಿದರು.

ನಗರದ ಒಳಚರಂಡಿ ವ್ಯವಸ್ಥೆ, ರಸ್ತೆ ಸುಧಾರಣೆ, ಬೀದಿ ದೀಪಗಳು, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳು ಈ ಹೂಡಿಕೆಯಿಂದ ಕೈಗೆತ್ತಿಕೊಳ್ಳಲಾಗಲಿವೆ ಎಂದು ಮೇಯರ್ ಗಿರೀಶ್ ಚನ್ನವೀರಪ್ಪ ತಿಳಿಸಿದರು.