ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಹೊರವಲಯದ ಸುವರ್ಣಾವತಿ ಹಳ್ಳ ಸಮೀಪ ಗುರುವಾರ ಮನುಷ್ಯನ ಮುಂಗೈ ಪತ್ತೆಯಾಗಿದ್ದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹೊರ ತೆಗೆಸಿದ ಶವ ಮಹಿಳೆಯದ್ದಾಗಿದ್ದು, ಸೋನಾಕ್ಷಿ ಎಂದು ಗುರುತು ಪತ್ತೆ ಮಾಡಲಾಗಿದೆ.
ಭೂಮಿಯ ಹಳ್ಳದಲ್ಲಿ ಮುಂಗೈ ಪತ್ತೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದಂತೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ, ಡಿವೈಎಸ್ಪಿ ಎಂ. ಧಮೇಂದ್ರ, ಸಿಪಿಐ ಶಿವಮಾದಯ್ಯ, ಪಟ್ಟಣ ಪಿಎಸ್‌ಐ ವರ್ಷಾ ಸ್ಥಳಕ್ಕೆ ಭೇಟಿ ನೀಡಿದ್ದರು.
ನಂತರ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಸಮ್ಮುಖದಲ್ಲಿ ಪೊಲೀಸರು ಮೃತ ದೇಹ ಹೊರತೆಗೆದು ಶವವನ್ನು ಚಾಮರಾಜನಗರ ಜಿಲ್ಲಾ ವೈದ್ಯಕೀಯ ಆಸ್ಪತ್ರೆಗೆ ರವಾನಿಸಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪೊಲೀಸ್ ಠಾಣೆಯಲ್ಲಿ ಮಹಿಳಾ ನಾಪತ್ತೆ ಪ್ರಕರಣಗಳ ಪೈಕಿ ಪತ್ತೆಯಾದವರು ಹಾಗೂ ಪತ್ತೆಯಾಗದಿರುವವರ ಬಗ್ಗೆ ಮಾಹಿತಿ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದರು.
ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಎರಡ್ಮೂರು ತಿಂಗಳ ಹಿಂದೆ ಕಾಣೆಯಾಗಿ ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಕೊಳ್ಳೇಗಾಲ ಉಪ್ಪಾರ ಬಡಾವಣೆ ನಿವಾಸಿ ವಿಜಯ್‌ಕುಮಾರ್ ಅವರ ಪತ್ನಿ ಸೋನಾಕ್ಷಿ (29ವರ್ಷ) ಮೃತದೇಹ ಎಂಬ ಅನುಮಾನ ಮೂಡಿತ್ತು. ಹಾಗಾಗಿ ಸೋನಾಕ್ಷಿ ಅವರ ತಾಯಿಯನ್ನು ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ದು ಶವವನ್ನು ತೋರಿಸಿದಾಗ, ಇದು ನನ್ನ ಪುತ್ರಿ ಸೋನಾಕ್ಷಿ ಶವ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಸೋನಾಕ್ಷಿ ಎರಡು ಬಾರಿ ನಾಪತ್ತೆಯಾಗಿ ಪತ್ತೆಯಾಗಿದ್ದಳು ಎನ್ನಲಾಗಿದೆ. ಸದ್ಯ ಮೃತಳ ತಾಯಿ ಕೊಟ್ಟ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರು: ಜೂ.19 ರಂದು ಗ್ರಾಮದ ನಾಗರಾಜು ಅಲಿಯಾಸ್ ನಾಗಟ್ಟಿ ಅವರ ಜಮೀನಿನ ಹತ್ತಿರವಿರುವ ಸುವರ್ಣಾವತಿ ನದಿ ದಡದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ನಾಯಿ ಮಣ್ಣನ್ನು ಕೆದುಕಿ ಗುಂಡಿ ತೆಗೆದಿತ್ತು. ನಂತರ ಹತ್ತಿರ ಹೋಗಿ ನೋಡಿದಾಗ ಸುಮಾರು 2 ಅಡಿ ಆಳದಲ್ಲಿ ಮನುಷ್ಯನ ಮುಂಗೈ ಬೆರಳು ಸಮೇತ ಕೈ ಕಾಣುಸಿತು. ಯಾರೋ ಮೃತದೇಹವನ್ನು ಹೂತಿರಬಹುದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಗೈ ಪತ್ತೆಯಾದ ಸ್ಥಳದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 40 ಅಡಿ ದೂರದಲ್ಲಿ ಒಂದು ಮಣ್ಣಿನ ದೀಪ, ಒಂದು ನೀರಿನ ಬಾಟಲಿ ವಾಮಚಾರ ಮಾಡಿರೋ ರೀತಿ ಕಂಡು ಬಂದಿತ್ತು. ಎಲ್ಲಿಂದಲೋ ಮೃತದೇಹವನ್ನು ತಂದು ಹೂತಿರಬಹುದೆಂಬ ಅನುಮಾನದ ಹಿನ್ನೆಲೆಯಲ್ಲಿ ಹಳೇ ಹಂಪಾಪುರ ಗ್ರಾಮದ ಶಶಿಕುಮಾರ್ ಕೊಳ್ಳೇಗಾಲ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.
ಹಳೇ ಹಂಪಾಪುರದಲ್ಲಿ ದೊರೆತ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಕೊಳ್ಳೇಗಾಲ ಮೋಳೆ ನಿವಾಸಿ ಸೋನಾಕ್ಷಿ ಶವ ಇದಾಗಿದೆ. ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಡಾ.ಕವಿತಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾನಗರ ಜಿಲ್ಲಾ