ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದಲ್ಲಿ ಮುಂಡೂರು ಮತ್ತು ಸರ್ವೆ ಗ್ರಾಮಗಳಿಗಿಂತ ಜಾಸ್ತಿ ಕಟ್ಟಡ ತೆರಿಗೆ ವಿಧಿಸಲಾಗುತ್ತಿದೆ. ಕೆಮ್ಮಿಂಜೆ ಗ್ರಾಮಾಂತರ ಪ್ರದೇಶವಾಗಿದ್ದರೂ ನಗರ ವ್ಯಾಪ್ತಿಯ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತಿದ್ದು, ಈ ತಾರತಮ್ಯ ಯಾಕೆ? ಎಂದು ಸದಸ್ಯ ಬಾಬು ಕಲ್ಲುಗುಡ್ಡೆ ಪ್ರಶ್ನಿಸಿದರು.
ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ. ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಸದಸ್ಯ ಕಮಲೇಶ್ ಎಸ್.ವಿ. ಮಾತನಾಡಿ, 2022ರ ನಂತರ ಮನೆ ತೆರಿಗೆ ಸಂಗ್ರಹ ಹಾಗೂ ರಶೀದಿ ನೀಡುವಿಕೆ ಸಂಪೂರ್ಣ ಗಣಕೀಕೃತ ಆಗಿರುವುದರಿಂದ ಭೂ ಪರಿವರ್ತನೆಯಾಗಿ 9/11 ಆಗಿರುವ ಆಸ್ತಿಗಳಲ್ಲಿ ಇರುವ ಮನೆಗಳಿಂದ ಮಾತ್ರ ಮನೆ ತೆರಿಗೆ ಸಂಗ್ರಹ ಮಾಡಲು ತಂತ್ರಾಂಶದಲ್ಲಿ ಸಾಧ್ಯವಾಗುತ್ತಿದೆ. ಭೂ ಪರಿವರ್ತನೆ ಮತ್ತು 9/11 ಆಗದ ಸ್ಥಳಗಳಲ್ಲಿ ಇರುವ, ಹಿಂದೆ ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದ ಹಳೆಯ ಮನೆಗಳಿಂದ ತೆರಿಗೆ ಸಂಗ್ರಹ ಮಾಡಲು ಈಗ ಸಾಧ್ಯವಾಗುತ್ತಿಲ್ಲ. ಅಂತಹ ಆಸ್ತಿಗಳಿಂದ ತೆರಿಗೆ ಸಂಗ್ರಹ ಮಾಡಲು ಆಸ್ತಿಗಳ ಮಾಲೀಕರ 11ಬಿ ದಾಖಲೆ ಮಾಡಿಸಿ ಅವರನ್ನು ತೆರಿಗೆ ಸಂಗ್ರಹ ವ್ಯಾಪ್ತಿಗೆ ತರುವ ಪ್ರಕ್ರಿಯೆ ಆಗಬೇಕಿತ್ತು. ಆದರೆ ಮುಂಡೂರು ಗ್ರಾ.ಪಂ. ಅಧ್ಯಕ್ಷರ, ಪಿಡಿಒ ಬೇಜವಾಬ್ದಾರಿಯಿಂದ ಇದು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಕಾರ್ಯದರ್ಶಿ ಸೂರಪ್ಪ ವರದಿ, ಅರ್ಜಿಗಳನ್ನು ಸಭೆಯ ಮುಂದಿಟ್ಟರು. ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಮಹಮ್ಮದ್ ಆಲಿ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ದುಗ್ಗಪ್ಪ ಕಡ್ಯ, ಅರುಣಾ ಎ.ಕೆ., ರಸಿಕಾ ರೈ ಮೇಗಿನಗುತ್ತು, ಕಮಲಾ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ., ಪ್ರೇಮಾ ಎಸ್., ಸುನಂದಾ ಮೊದಲಾದವರಿದ್ದರು. ಪಿಡಿಒ ಜಗದೀಶ್ ಸ್ವಾಗತಿಸಿದರು.
ಮನೆ ತೆರಿಗೆ ಪಾವತಿಸಿ ರಶೀದಿ ಪಡೆಯಲು ಸಾಧ್ಯವಾಗದ 200ಕ್ಕೂ ಹೆಚ್ಚು ಮನೆಗಳು ಗ್ರಾ.ಪಂ. ವ್ಯಾಪ್ತಿಯಲ್ಲಿ ಇವೆ. ಬ್ಯಾಂಕ್ ಸಾಲ ಪಡೆಯಲು, ಆಸ್ತಿ ಪಾಲುಪಟ್ಟಿ ಮಾಡಿಕೊಳ್ಳಲು, ಆಸ್ತಿ ಮಾರಾಟ ಮಾಡಲು ಪರದಾಡುವಂಥ ಪರಿಸ್ಥಿತಿ ಅವರಿಗೆ ನಿರ್ಮಾಣವಾಗಿದೆ. ಈ ಆಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಬಿಟ್ಟು ಹೋದ ಕಾರಣ ಪಂಚಾಯಿತಿಗೆ 4 ವರ್ಷಗಳಲ್ಲಿ 10 ಲಕ್ಷ ರೂ.ನಷ್ಟು ತೆರಿಗೆ ನಷ್ಟವಾಗಿದೆ ಎಂದು ಗ್ರಾ.ಪಂ. ಸದಸ್ಯ ಕಮಲೇಶ್ ಎಸ್.ವಿ. ಆರೋಪಿಸಿದರು.
ಕೆಮ್ಮಿಂಜೆ ಗ್ರಾಮದ ಕೊರುಂಗು, ದಂಡ್ಯನಕುಕ್ಕು ಮೊದಲಾದ ಕಡೆಗಳಲ್ಲಿ ಪದೇ ಪದೆ ನೀರಿನ ಪೈಪು ಕಡಿತಗೊಂಡು ಸಮಸ್ಯೆ ಎದುರಾಗುತ್ತಿದೆ ಎಂದು ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಹೇಳಿದರು. ರೆಂಜಲಾಡಿ- ಭಕ್ತಕೋಡಿ ರಸ್ತೆ ಹಾಗೂ ಕೂಡುರಸ್ತೆ ತಿಂಗಳಾಡಿ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಈ ಎರಡೂ ರಸ್ತೆಗಳನ್ನು ದುರಸ್ತಿ ಮಾಡಲು ಸರ್ಕಾರಕ್ಕೆ ಬರೆಯಬೇಕು ಎಂದು ಕರುಣಾಕರ ಗೌಡ ಎಲಿಯ ಒತ್ತಾಯಿಸಿದರು.