ಜಿಲ್ಲೆ

ಶಾಲೆ ಸಮೀಪವೇ ಗಣಿಗಾರಿಕೆ, ಡಿಸಿಗೆ ದೂರು ನೀಡಿದ ಮುಂಡಿಗೆಹಳ್ಳಿ ಗ್ರಾಮಸ್ಥರು

ಶಿರಸಿ: ಬನವಾಸಿ ಸಮೀಪದ ಗುಡ್ನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡಿಗೆಹಳ್ಳಿ ಗ್ರಾಮದ ಸರ್ವೇ ನಂ.25ರಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.

ಮುಂಡಿಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಗುಡ್ನಾಪೂರದ ಚಂದ್ರಪ್ಪ ಚನ್ನಯ್ಯ ಎಂಬುವವರು ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.

ಈ ಕಲ್ಲು ಕೊರೆಯಿಂದಾಗಿ ಶಾಲೆಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳ ದಂಡು ಈ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥ ಯೋಗೇಶ ಗೌಡ, ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಕೊರೆ ನಡೆಯುತ್ತಿದೆ.

ಇದರಿಂದಾಗಿ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜತೆಗೆ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳೇ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಕೆಲವು ತಿಂಗಳ ಹಿಂದೆ ಕಲ್ಲುಕೊರೆಯ ವಿರುದ್ಧ ದೂರು ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕವಾಗಿ ಬಂದ್ ಮಾಡಿಸಿ, ಯಂತ್ರೋಪಕರಣ, ವಾಹನಗಳನ್ನು ವಶಪಡಿಸಿಕೊಂಡಿದ್ದರು. ಅದರೆ, ಈಗ ಮತ್ತೆ ಅಕ್ರಮವಾಗಿ ಕಲ್ಲುಗಣಿಗಾರಿಕೆ ಆರಂಭಿಸಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆರಿಯಪ್ಪ ಗೌಡ ಮಾತನಾಡಿ, ಅಕ್ರಮ ಗಣಿಗಾರಿಕೆಯ ವಿರುದ್ಧ ಹಲವು ಬಾರಿ ದೂರು ನೀಡಿದ್ದೇವೆ. ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಉಪ ತಹಸೀಲ್ದಾರ್ ನಾಗರಾಜ ಬೋರಕರ ಮಾತನಾಡಿ, ಅಕ್ರಮ ಕೆಂಪು ಕಲ್ಲು ಕೊರೆಯ ವಿರುದ್ಧ ಈ ಮೊದಲೇ ಕ್ರಮ ಜರುಗಿಸಿ ಕೊರತೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ದಿನಗಳ ಹಿಂದೆ ಅಕ್ರಮವಾಗಿ ಕಲ್ಲು ಕೊರೆ ಆರಂಭಿಸಿದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣವೇ ಅಲ್ಲಿಗೆ ಭೇಟಿ ನೀಡಿದ್ದೇವೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅನಧಿಕೃತ ಕಲ್ಲು ಕೊರೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.


ಬನವಾಸಿ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಕಲಾ ಪತ್ತಾರ, ಎಸ್‌ಡಿಎಂಸಿ ಉಪಾಧ್ಯಕ್ಷೆ ವೀಣಾ ಗೌಡ, ಗ್ರಾಮಸ್ಥರಾದ ಭಾಸ್ಕರ ಗೌಡ, ನಾಗಪತಿ ನಾಯ್ಕ, ಗಣಪತಿ ಗೌಡ, ಯೋಗಿಣಿ ನಾಯ್ಕ, ನಾಗವೇಣಿ ಗೌಡ, ಜಯಶ್ರೀ ಗೌಡ, ನೇತ್ರಾ ಗೌಡ, ಮೇಘನಾ ಗೌಡ, ಲಲಿತಾ ಗೌಡ, ಇಂದುಮತಿ ಗೌಡ ಮತ್ತಿತರು ಇದ್ದರು.