ಮುಂಡರಗಿ: ವಿದ್ಯಾರ್ಥಿಗಳು ಸದಾ ಕ್ರಿಯಾಶೀಲ, ಸ್ಪರ್ಧಾ ಮನೋಭಾವ ಹೊಂದಿರಬೇಕು ಎಂದು ಗದಗ ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ದಸರಾ ರಜೆ ಪ್ರಯುಕ್ತ 8ನೇ ತರಗತಿ ಮಕ್ಕಳಿಗೆ ಭಾನುವಾರದಿಂದ ಹತ್ತು ದಿನಗಳವರೆಗೆ ಹಮ್ಮಿಕೊಂಡಿರುವ ಎನ್‌ಎಂಎಂಎಸ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂತಹ ಕಾರ್ಯಾಗಾರಗಳಿಂದ ತಾಲೂಕಿನಿಂದ ಪ್ರತಿವರ್ಷ ಸುಮಾರು 30 ವಿದ್ಯಾರ್ಥಿಗಳು ಎನ್‌ಎಂಎಂಎಸ್‌ಗೆ ಆಯ್ಕೆಯಾಗುತ್ತಿದ್ದಾರೆ ಎಂದರು.
ಬಿಇಒ ಗಂಗಾಧರ ಅಣ್ಣಿಗೇರಿ, ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿದರು. ಕಾರ್ಯಾಗಾರದಲ್ಲಿ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿದಾನಂದ ವಡ್ಡರ, ಕುಮಾರ ಬಿ., ರವಿನಾಯಕ ಎಲ್.ಟಿ., ಎಸ್.ಎನ್. ಕಲಿಗನೂರ ಇದ್ದರು. ಶಿಕ್ಷಕ ಎಸ್.ಬಿ. ಗಿಂಡಿಮಠ, ರಾಜೇಶ ಅಥಣಿ ನಿರ್ವಹಿಸಿದರು.