ಮುಂಡರಗಿ: ಗ್ರಾಮೀಣ ಗ್ರಂಥಾಲಯ ಅಲ್ಲಿನ ಮಕ್ಕಳಿಗೆ ಪೂರಕ ವಾತಾವರಣ ಇರಬೇಕು. ಕಥೆ, ಕಾದಂಬರಿ, ಗಟ್ಟಿ ಓದು, ಚೆಸ್, ಕೇರಂ ಆಟಗಳ ಮೂಲಕ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಡಿಜಿ ವಿಕಸನ ಇತರ ಸೌಲಭ್ಯಗಳಿಂದ ಮಕ್ಕಳಿಗೆ ಗ್ರಂಥಾಯದ ಕಡೆ ಹೆಚ್ಚು ಆಕರ್ಷಣೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಅಬ್ದುಲ್ನಜೀರ್ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆ, ಜಿಪಂ, ತಾಪಂ ಸಹಯೋಗದಲ್ಲಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕರ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯ ಮೇಲ್ವಿಚಾರಕರು ತರಬೇತಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮಕ್ಕಳಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಸಂಸ್ಥೆಯ ವೀಕೇಂದ್ರಿಕೃತ ತರಬೇತಿ ಸಂಯೋಜಕ ಮಂಜುನಾಥ ಮುಧೋಳ, ಮಕ್ಕಳಿಗೆ ಗಟ್ಟಿ ಓದು ಕಲಿಸುವುದರಿಂದ ಅವರಲ್ಲಿ ಅಕ್ಷರಗಳ ಮಹತ್ವದ ವಿಷಯಗಳ ಅರಿವು ಮೂಡುತ್ತದೆ. ಸಂವಹನ ಕೌಶಲ, ಮಕ್ಕಳಿಗೆ ನಾಗರಿಕ ಪ್ರಜ್ಞೆ ಮೂಡಿಸುವುದು, ಗ್ರಂಥಾಲಯಗಳ ಮೇಲ್ವಿಚಾರಕರ ಪಾತ್ರ ಕುರಿತು ಮಾಹಿತಿ ನೀಡಿದರು.
ಶಿಕ್ಷಣ ಫೌಂಡೇಷನ್ನ ಬಸವರಾಜ ಬಡಿಗೇರ, ವಿಷಯ ನಿರ್ವಾಹಕ ಶಾಬೂದ್ದಿನ್ ನದಾಫ್, ತರಬೇತಿ ಸುಗಮಗಾರ ಅಂದಪ್ಪ ತುರಕಾಣಿ, ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.