ಜಿಲ್ಲೆ

ಬರಪೀಡಿತ ತಾಲೂಕು ಘೋಷಣೆಗೆಆಗ್ರಹಿಸಿ ಮುಂಡರಗಿ ಬಂದ್ 25ರಂದು

ಮುಂಡರಗಿ: ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳುವ ಕುರಿತು ಪಟ್ಟಣದ ಪುರಸಭೆ ಮೈದಾನದಲ್ಲಿ ಶುಕ್ರವಾರ ವಿವಿಧ ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಹಾಗೂ ಮತ್ತಿತರ ಪ್ರಮುಖರ ಸಭೆ ಹಮ್ಮಿಕೊಳ್ಳಲಾಗಿತ್ತು.

ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸೆ.25ರಂದು ಮುಂಡರಗಿ ಪಟ್ಟಣ ಬಂದ್ ಮಾಡಿ, ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲು ತೀರ್ಮಾನಿಸಲಾಯಿತು.

ಪಟ್ಟಣದ ವ್ಯಾಪಾರಸ್ಥ ಸಂಘಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಸಾರ್ವಜನಿಕರು, ಪ್ರತಿ ಗ್ರಾಪಂನಿಂದ ಕನಿಷ್ಠ 100 ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ತಿಳಿಸಿದರು.

ಸೆ.25ರಂದು ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ವಿವಿಧ ವೃತ್ತಗಳ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸುವುದು. ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವವರೆಗೂ ನಿರಂತರವಾಗಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ರೈತ ಪ್ರಮುಖ ಚಂದ್ರಕಾಂತ ಉಳ್ಳಾಗಡ್ಡಿ ಮಾಹಿತಿ ನೀಡಿದರು.

ನಿರಂತರವಾಗಿ ನೀರು ಹರಿಸಲಾಗುವ ಗಂಗಾವತಿ, ಕಾರಟಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಸತತ ಬರಗಾಲದಿಂದ ತತ್ತರಿಸುತ್ತಿರುವ ಮುಂಡರಗಿ ತಾಲೂಕನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಸಭೆಯಲ್ಲಿ ರೈತರು ಸರ್ಕಾರದ ವಿರುದ್ಧ ಹರಿಹಾಯ್ದರು. ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ, ಅಶೋಕ ಶಿದ್ಲಿಂಗ್, ಕೊಟ್ರೇಶ ಅಂಗಡಿ, ಗೌತಮಚಂದ್ ಚೋಪ್ರಾ, ಶೇಖಣ್ಣ ಜುಟ್ಲಣ್ಣವರ, ಬಸವರಾಜ ನವಲಗುಂದ, ಅಡಿವೆಪ್ಪ ಚಲವಾದಿ, ದೇವು ಹಡಪದ, ಲಕ್ಷ್ಮಣ ತಗಡಿನಮನಿ, ವಿಶ್ವನಾಥ ತಾಂಬ್ರಗುಂಡಿ, ದೃವಕುಮಾರ ಹೂಗಾರ, ರಾಜು ಅಸುಂಡಿ, ರಾಮು ಭಜಂತ್ರಿ, ಬಸಪ್ಪ ವಡ್ಡರ, ಇತರರಿದ್ದರು.