ಬೆಳ್ತಂಗಡಿ: ಮುಂಡಾಜೆ ಗ್ರಾ.ಪಂ. ಗ್ರಾಮಸಭೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಗ್ರಾಮಸಭೆಗೆ ಹೆಚ್ಚಿನ ಇಲಾಖೆಗಳ ಅಧಿಕಾರಿಗಳು ಹಾಜರಾಗದ ಕಾರಣ ಗ್ರಾಮಸ್ಥರು ಆಕ್ರೋಶಿತರಾದರು. ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಮಾತನಾಡಿ, ಇಲಾಖೆಯ ಅಧಿಕಾರಿಗಳಿಗೆ ಪಂಚಾಯಿತಿಯಿಂದ ಈಗಾಗಲೇ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಅವರು ಬರುವ ನಿರೀಕ್ಷೆಯಿದ್ದು ಗ್ರಾಮಸಭೆ ಮುಂದುವರಿಸಲು ಗ್ರಾಮಸ್ಥರು ಅವಕಾಶ ನೀಡುವಂತೆ ಕೋರಿದ ಬಳಿಕ ಗ್ರಾಮಸಭೆ ಮುಂದುವರಿಯಿತು. ಕೊನೆಗೂ ಹೆಚ್ಚಿನ ಇಲಾಖೆಯ ಅಧಿಕಾರಿಗಳು ಹಾಜರಾಗಲಿಲ್ಲ.
ಗ್ರಾಮಸ್ಥ ಕಜೆ ವೆಂಕಟೇಶ್ವರ ಭಟ್ ಮಾತನಾಡಿ, ಗ್ರಾಮದಲ್ಲಿರುವ ಕಿಂಡಿ ಅಣೆಕಟ್ಟುಗಳ ಹೂಳನ್ನು ಫಲಾನುಭವಿಗಳು ತೆರವು ಮಾಡಲು ಮುಂದಾದರೆ ಪೊಲೀಸ್, ಅರಣ್ಯ ಇಲಾಖೆ ಸಹಿತ ಕೆಲವು ಇಲಾಖೆಗಳು ಅಡ್ಡಿಪಡಿಸುತ್ತವೆ. ಇವುಗಳ ಹೂಳನ್ನು ತೆರವುಗೊಳಿಸಲು ಪಂಚಾಯಿತಿಯಿಂದ ಅನುಮತಿ ನೀಡಬೇಕು ಎಂಬ ವಿಚಾರ ಪ್ರಸ್ತಾಪಿಸಿದರು. ಇದು ಕಂದಾಯ ಇಲಾಖೆ ವ್ಯಾಪ್ತಿಯಾದ ಕಾರಣ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಮುಂಡಾಜೆಯಲ್ಲಿ ಎರಡು ಸರ್ಕಾರಿ ಹಾಸ್ಟೆಲ್‌ಗಳಿದ್ದು ಇಲ್ಲಿ ವಾರ್ಡನ್‌ಗಳು ಇಲ್ಲದ ಕಾರಣ ಮಕ್ಕಳ ಸ್ಥಿತಿಗತಿಯನ್ನು ವಿಚಾರಿಸುವವರು ಇಲ್ಲದಂತಾಗಿದೆ. ಇಲ್ಲಿ ತಕ್ಷಣ ವಾರ್ಡನ್ ನೇಮಿಸಬೇಕು ಎಂದು ಚೆನ್ನಕೇಶವ ಅರಸಮಜಲ್ ಹೇಳಿದರು. ಈ ಬಗ್ಗೆ ತಕ್ಷಣ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಆಟೋರಿಕ್ಷಾಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕೊಂಡೊಯ್ಯುವ ವಿಚಾರವನ್ನು ಗ್ರಾಮಸ್ಥ ಬಿಜು ಸಭೆಯ ಗಮನಕ್ಕೆ ತಂದರು. ಮುಂಡಾಜೆಯ ರುದ್ರಭೂಮಿಗೆ ಬೇಲಿ ರಚಿಸಬೇಕೆಂದು ಗ್ರಾಮಸ್ಥರಾದ ಅನಂತ ಮತ್ತು ವಾಸು ಆಗ್ರಹಿಸಿದರು. ಮುಂಡಾಜೆ ಹಿ.ಪ್ರಾ. ಶಾಲೆಯ ಆವರಣದಲ್ಲಿರುವ ಅಪಾಯಕಾರಿ ಮರಗಳ ತೆರವಿನ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಯಿತು.
ಉಪಾಧ್ಯಕ್ಷೆ ಸುಮಲತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯೆ ರಂಜಿನಿ ಸ್ವಾಗತಿಸಿದರು. ಪಿಡಿಒ ಗಾಯತ್ರಿ ವರದಿ ವಾಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆ
ಮಲ್ಲಿಕಟ್ಟೆ ಎಂಬಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ವಿಚಾರ ಪ್ರಸ್ತಾಪವಾಯಿತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮದ ಅಲ್ಲಲ್ಲಿ ಸಮಸ್ಯೆಗಳು ಉಂಟಾಗಿವೆ. ಜಾಗ ಕಳೆದುಕೊಳ್ಳುವವರಿಗೆ ಸರಿಯಾದ ಪರಿಹಾರ ಮೊತ್ತ ನಿಗದಿಪಡಿಸಿಲ್ಲ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಹಾಗೂ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಬೇಕೆಂದು ಗ್ರಾಮಸ್ಥ ನಾಮದೇವ ರಾವ್ ಆಗ್ರಹಿಸಿದರು.