ಜಿಲ್ಲೆ

ತೆನೆ ಕಟ್ಟುವಾಗ ಒಣಗಿದ ಗೋವಿನಜೋಳ ಬೆಳೆ

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದ ರೈತ ಮಾರುತಿ ಭರಮಣ್ಣ ಕಂಚಿಕೊಪ್ಪ ಎಂಬುವವರು ಕರವಳ್ಳಿ ಗ್ರಾಮದ ಎರಡೂವರೆ ಹೊಲದಲ್ಲಿ ಬೆಳೆದಿದ್ದ ಗೋವಿನಜೋಳದ ಬೆಳೆ ತೆನೆ ಹಾಕುವ ಹಂತದಲ್ಲಿ ಕೆಂಪು ಬಣ್ಣಕ್ಕೆ ತಿರುಗಿ, ಜೋಳದ ಗಿಡಗಳು ಒಣಗಿವೆ.

ಆರಂಭದಲ್ಲಿ ಉತ್ತಮವಾಗಿದ್ದ ಬೆಳೆ ತೆನೆ ಹಾಕುವ ಹಂತದಲ್ಲಿ ಒಣಗಿದೆ. ಇಡೀ ಗದ್ದೆಯಲ್ಲಿನ ಎಲ್ಲ ಗೋವಿನಜೋಳದ ಗಿಡಗಳಿಗೂ ಇದೇ ರೀತಿಯಾಗಿದೆ. ಇದರಿಂದಾಗಿ ರೈತನಿಗೆ ದಿಕ್ಕು ತೋಚದಂತಾಗಿದೆ. ಹಣ ಖರ್ಚು ಮಾಡಿ ಸಾಕಷ್ಟು ಶ್ರಮವಹಿಸಿ ಬೆಳೆದಿದ್ದ ಬೆಳೆ ಸಂಪೂರ್ಣ ಒಣಗಿರುವುದು ಯಾಕೆ ಎಂಬುದೇ ತಿಳಿಯದಾಗಿದೆ.

ಬೆಳೆಗೆ ಯಾವ ರೋಗ ತಗುಲಿದೆ, ಯಾಕೆ ಹೀಗಾಯ್ತು ಎಂಬುದನ್ನು ಪತ್ತೆ ಹಚ್ಚುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಅಧಿಕಾರಿಗಳು ಶೀಘ್ರದಲ್ಲಿ ಹೊಲಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ರೈತ ಮಾರುತಿ ಮಾಹಿತಿ ನೀಡಿದ್ದಾರೆ.