ಜಿಲ್ಲೆ

ಒಣ ಭೂಮಿ ಬಿತ್ತನೆಗೆ ಹಿನ್ನಡೆ

ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ
ಈ ಬಾರಿ ಮೇ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ತಾಲೂಕಿನ ಒಣ ಭೂಮಿಯಲ್ಲಿ ಬೀಜ ಬಿತ್ತನೆಗೆ ಹಿನ್ನಡೆಯಾಗಿದೆ.
ತಾಲೂಕಿನ ಹೆಚ್ಚಿನ ಪ್ರದೇಶದಲ್ಲಿ ಮಳೆಯಾಶ್ರಿತವಾಗಿ ಭತ್ತ ಹಾಗೂ ಗೋವಿನ ಜೋಳ ಬೆಳೆಯುತ್ತಾರೆ. ಜೂನ್‌ನಲ್ಲಿ ಮುಂಗಾರು ಮಳೆ ಆರಂಭವಾದರೆ ಬಿತ್ತನೆಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ರೈತರು ಮೇ ತಿಂಗಳಲ್ಲಿ ಒಣ ಭೂಮಿಯಲ್ಲಿ ಬಿತ್ತನೆ ಮಾಡುತ್ತಾರೆ. ಇದರಿಂದ ಮಳೆಗಾಲ ಆರಂಭದ ವೇಳೆಗೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿವರ್ಷ ತಾಲೂಕಿನಲ್ಲಿ ಶೇ. 80ರಷ್ಟು ಭತ್ತ ಹಾಗೂ ಗೋವಿನಜೋಳ ಬೀಜಗಳನ್ನು ಒಣ ಮಣ್ಣಿನಲ್ಲಿ ಬಿತ್ತನೆ ಮಾಡುತ್ತಾರೆ.
ತಾಲೂಕಿನಲ್ಲಿ ಅತಿಕ್ರಮಣ ಸೇರಿ ಒಟ್ಟು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೀಜ ಬಿತ್ತನೆ ಮಾಡಲಾಗುತ್ತದೆ. 5 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾಗೂ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಅತಿ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗುತ್ತದೆ.
ಪ್ರತಿವರ್ಷ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ತಾಲೂಕಿನಾದ್ಯಂತ ಉತ್ತಮ ಹದ ಮಳೆಯಾಗುತ್ತಿತ್ತು. ಇದರಿಂದಾಗಿ ರೈತರು ತಮ್ಮ ಗದ್ದೆಗಳನ್ನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೇ ತಿಂಗಳು ಆರಂಭವಾದ ನಂತರ ಒಣ ಭೂಮಿಯಲ್ಲಿ ಭತ್ತ ಹಾಗೂ ಗೋವಿನಜೋಳ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ವರ್ಷ ತಾಲೂಕಿನಲ್ಲಿ ಇದುವರೆಗೂ ಹದವಾದ ಮಳೆಯಾಗಿಲ್ಲ. ಮೇ ಅಂತ್ಯದವರೆಗೆ ತಾಲೂಕಿನಲ್ಲಿ ಶೇ. 80ರಷ್ಟು ರೈತರು ಒಣ ಭೂಮಿಯಲ್ಲಿ ಬಿತ್ತನೆ ಕಾರ್ಯಮಾಡಿ ಮುಗಿಸುತ್ತಿದ್ದರು. ಆದರೆ, ಈ ವರ್ಷ ಹದ ಮಳೆಯಾಗದ ಕಾರಣ ತಾಲೂಕಿನಲ್ಲಿ ಇದೂವರೆಗೂ ಒಣ ಬಿತ್ತನೆ ಆರಂಭವಾಗಿಲ್ಲ.
ಇದೀಗ ಜೂನ್ ತಿಂಗಳು ಸಮೀಪಿಸುತ್ತಿದೆ. ಮುಂಗಾರು ಮಳೆ ನಿರಂತರವಾಗಿ ಸುರಿಯಲು ಆರಂಭಿಸಿದರೆ ರೈತರು ಭೂಮಿ ಹಸನು ಮಾಡಿಕೊಂಡು ಬಿತ್ತನೆ ಮಾಡಲು ಹರಸಾಹಸ ಪಡಬೇಕಾಗುತ್ತದೆ. ಕಳೆದ ವರ್ಷ ಜನವರಿಯಿಂದ ಮೇ 26ರವರೆಗೆ ತಾಲೂಕಿನಲ್ಲಿ 404 ಮಿ.ಮೀ. ಮಳೆಯಾಗಿತ್ತು. ಆದರೆ, ಈ ವರ್ಷ ಜನವರಿಯಿಂದ ಮೇ 26ರ ವರೆಗೆ 31 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೊಲಿಸಿದರೆ ಶೇ. 10ಕ್ಕಿಂತ ಕಡಿಮೆ ಮಳೆಯಾಗಿದೆ.

ಈ ವರ್ಷ ಉತ್ತಮ ಹದ ಮಳೆಯಾಗದ ಕಾರಣ ಭೂಮಿಯನ್ನು ಹಸನಾಗಿಸಿ ಒಣ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈಗ ಮುಂಗಾರು ಮಳೆ ಆರಂಭವಾದರೆ ಭೂಮಿ ಹಸನು ಮಾಡಿ ಬಿತ್ತನೆ ಮಾಡಲು ಹಿನ್ನಡೆಯಾಗುತ್ತದೆ. ಮಳೆಗಾಗಿ ಆಕಾಶದತ್ತ ನೋಡುವಂತಾಗಿದೆ.ಮಹೇಶ ಹಿರೇಮಠ ರೈತ ಚಿಗಳ್ಳಿ
ತಾಲೂಕಿನಲ್ಲಿ ಈ ವರ್ಷ ರೈತರು ಗದ್ದೆಗಳನ್ನು ಹಸನ ಮಾಡಿಕೊಂಡು ಒಣ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಮಳೆಗಾಗಿ ರೈತರು ಆಕಾಶದತ್ತ ನೋಡುವಂತಾಗಿದೆ. ಉತ್ತಮ ಮಳೆಯಾದರೆ ರೈತರು ಭೂಮಿ ಹಸನಾಗಿಸಿ ಬಿತ್ತನೆ ಮಾಡಲು ಕಾಯುತ್ತಿದ್ದಾರೆ.ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೆಶಕ